ಕೆಎಂಎಫ್ ನಂದಿನಿ ಹಾಲಿನ ರೀತಿಯಲ್ಲೇ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿಯಿಂದ ಭೀಮಾ ಪಲ್ಸಸ್ ತೊಗರಿಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಎರಡು ದಶಕಗಳ ಬೇಡಿಕೆ ಸಾಕಾರಗೊಂಡಿದ್ದು, ಕೈಗೆಟಕುವ ದರದಲ್ಲಿ ಗುಣಮಟ್ಟದ ತೊಗರಿ ಬೇಳೆಯನ್ನು ಗ್ರಾಹಕರಿಗೆ ಪೂರೈಕೆ ಮಾಡಲಾಗುವುದು. ಭೀಮಾ ತೊಗರಿ ಬೇಳೆ ಬೇಯಿಸಲು ಹೆಚ್ಚಿನ ಸಮಯ ಬೇಕಿಲ್ಲ. ಕಲಬುರ್ಗಿ ಜಿಲ್ಲೆಯ ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಹೇರಳವಾಗಿದ್ದು, ಗುಣಮಟ್ಟದ ತೊಗರಿ ಬೇಳೆ ಸಿಗುತ್ತದೆ. 2017ರಲ್ಲಿ ಕೇಂದ್ರ ಸರ್ಕಾರದ ಜಿಐ ಟ್ಯಾಗ್ ಮಾನ್ಯತೆ ಪಡೆದುಕೊಂಡಿದೆ.
ತೊಗರಿಬೇಳೆ ಬಿಡುಗಡೆ ಮಾಡಿರುವುದರಿಂದ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ. ರೈತರ ಬೆಳೆಗೆ ಬೆಲೆ ಖಾತರಿ ಸಿಗುತ್ತದೆ. ಈ ಬೇಳೆ ಪೌಷ್ಟಿಕತೆ ಹೊಂದಿದ್ದು, ಹೋಳಿಗೆ ಸೇರಿದಂತೆ ಹಲವು ಪದಾರ್ಥಗಳನ್ನು ತಯಾರಿಸಬಹುದು. ಕಡಿಮೆದರ ಇರುವುದರಿಂದ ಗ್ರಾಹಕರಿಗೂ ಅನುಕೂಲವಾಗಲಿದೆ. ಸದ್ಯಕ್ಕೆ ಒಂದು ಕೆಜಿ ಪ್ಯಾಕ್ ನಲ್ಲಿ ತೊಗರಿ ಬೇಳೆ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 5, 10 ಕೆಜಿ ಪ್ಯಾಕ್ ಗಳಲ್ಲಿಯೂ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ.