ಚೀನಿ ಆಪ್ ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಕೇಂದ್ರ ಸರ್ಕಾರ ಭಾರತದಲ್ಲಿ ಚೀನಾ ಮೂಲದ ಅನೇಕ ಆಪ್ಗಳನ್ನ ಬ್ಯಾನ್ ಮಾಡಿತ್ತು. ಈ ಸಾಲಿನಲ್ಲಿ ಅತ್ಯಂತ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್ ಜಿ ಕೂಡ ಸೇರಿತ್ತು. ಆದರೆ ಭಾರತದಲ್ಲಿ ಪಬ್ ಜಿ ಮತ್ತೊಮ್ಮೆ ಲಾಂಚ್ ಆಗಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಈ ಎಲ್ಲ ವದಂತಿಗಳಿಗೆ ಇದೀಗ ಸ್ವತಃ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಭಾರತದಲ್ಲಿ ಪಬ್ ಜಿ ರೀ ಲಾಂಚ್ ಊಹಾಪೋಹಗಳ ವಿಚಾರವಾಗಿ ಮೌನ ಮುರಿದಿರುವ ಕೇಂದ್ರ ಸರ್ಕಾರ ಈ ಗೇಮಿಂಗ್ ಅಪ್ಲಿಕೇಷನ್ ಮರುಪ್ರಾರಂಭಕ್ಕೆ ಇಲ್ಲಿಯವರೆಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಹೇಳಿದೆ.
ಪಬ್ಜಿ ಮರು ಪ್ರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ 2 ಆರ್ಟಿಐ ಅರ್ಜಿಗಳಿಗೆ ಉತ್ತರ ನೀಡಿದ ಕೇಂದ್ರ ಸರ್ಕಾರ, ಗೂಗಲ್ ಇಲ್ಲವೇ ಯಾವುದೇ ವೆಬ್ಸೈಟ್ಗಳ ಮುಖಾಂತರ ಈ ಅಪ್ಲಿಕೇಶನ್ ಬಳಕೆಗೆ ಭಾರತದಲ್ಲಿ ಯಾವುದೇ ಅನುಮತಿಯನ್ನ ನೀಡಲಾಗಿಲ್ಲ ಎಂದು ಹೇಳಿದೆ.
ಆದರೆ ಈ ವಿಚಾರ ಕೇಳಿದ ಭಾರತೀಯ ಪಬ್ ಜಿ ಅಭಿಮಾನಿಗಳಿಗೆ ನಿರಾಸೆಯಾಗಿರೋದಂತೂ ಸತ್ಯ. ಆದರೆ ಭಾರತದಲ್ಲೇ ಪಬ್ ಜಿ ಮಾದರಿಯ FAU-G ಗೇಮಿಂಗ್ ಅಪ್ಲಿಕೇಶನ್ ಅಭಿವೃದ್ಧಿಯಾಗುತ್ತಿದ್ದು ಇನ್ನು ಕೆಲವೇ ಸಮಯದಲ್ಲಿ ಮಾರುಕಟ್ಟೆಗೆ ಬರಲಿದೆ.