ವಾಟ್ಸಾಪ್ನ ಹೊಸ ಸೇವಾ ನಿಯಮವನ್ನ ಒಪ್ಪಿಕೊಳ್ಳೋದು ಬಿಡೋದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ವಾಟ್ಸಾಪ್ ಅನ್ನೋದು ಒಂದು ಖಾಸಗಿ ಅಪ್ಲಿಕೇಶನ್. ಇದರ ಹೊಸ ಸೇವಾ ನಿಯಮ ಒಪ್ಪಿಕೊಳ್ಳೋದು ನಿಮ್ಮ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು. ಸೇವಾ ನಿಯಮದ ಬಗ್ಗೆ ನಿಮಗೆ ಗೊಂದಲವಿದ್ದರೆ ನೀವು ಬೇರೆ ಮೆಸೆಜಿಂಗ್ ಅಪ್ಲಿಕೇಶನ್ಗಳನ್ನ ಆಯ್ಕೆ ಮಾಡಿಕೊಳ್ಳಿ ಎಂದು ನ್ಯಾಯಮೂರ್ತಿ ಸಂಜೀವ್ ಸಚ್ದೇವಾ ಹೇಳಿದ್ದಾರೆ.
ವಾಟ್ಸಾಪ್ನ ಹೊಸ ಸೇವಾ ನಿಯಮಗಳನ್ನ ಪ್ರಶ್ನಿಸಿ ವಕೀಲರೊಬ್ಬರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಪರೋಕ್ಷವಾಗಿ ಈ ವಿಚಾರದಲ್ಲಿ ತಾನು ಮೂಗು ತೂರಿಸೋದಿಲ್ಲ ಎಂದು ಹೇಳಿದೆ. ಅಲ್ಲದೇ ವಾಟ್ಸಾಪ್ ಮಾತ್ರವಲ್ಲದೇ ನೀವು ಬಳಕೆ ಮಾಡುವ ಅದೆಷ್ಟೋ ಅಪ್ಲಿಕೇಶನ್ಗಳ ಮೂಲಕ ನೀವು ಈಗಾಗಲೇ ನಿಮ್ಮ ಖಾಸಗಿ ಮಾಹಿತಿಯನ್ನ ನೀಡಲು ಅವಕಾಶ ನೀಡಿದ್ದೀರಿ ಎಂದೂ ಕೋರ್ಟ್ ಹೇಳಿದೆ.
ಗೂಗಲ್ ಮ್ಯಾಪ್ ಕೂಡ ಬಳಕೆದಾರರ ಎಲ್ಲಾ ಮಾಹಿತಿಗಳನ್ನ ಸಂಗ್ರಹಿಸಿಡುತ್ತದೆ ಎಂದೂ ದೆಹಲಿ ಹೈಕೋರ್ಟ್ ಮಾಹಿತಿ ನೀಡಿದೆ. ಹೊಸ ನಿಯಮದ ಪ್ರಕಾರ ಖಾಸಗಿ ಮೆಸೇಜ್ಗಳನ್ನ ವಾಟ್ಸಾಪ್ ನೋಡುವುದಿಲ್ಲ ಎಂದು ವಾಟ್ಸಾಪ್, ಫೇಸ್ಬುಕ್ ಪರ ವಕೀಲರಾದ ಕಪಿಲ್ ಸಿಬಲ್ ಹಾಗೂ ಮುಕುಲ್ ರೋಹ್ಟಗಿ ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.