ಹಣಕಾಸಿನ ವರ್ಷದ ಕೊನೆ ತಿಂಗಳ ಕೊನೆಯ ದಿನ ಮಾರ್ಚ್ 31. ಇಂದು ಹಣಕಾಸಿನ ವರ್ಷ ಕೊನೆಯಾಗ್ತಿದೆ. ಮುಂದಿನ ವರ್ಷ ಅಂದ್ರೆ ಏಪ್ರಿಲ್ ಒಂದರಿಂದ ಕೆಲ ನಿಯಮಗಳಲ್ಲಿ ಬದಲಾವಣೆಯಾಗ್ತಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2021 ರಲ್ಲಿ ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ ಘೋಷಿಸಿದ್ದಾರೆ. ಈ ಬದಲಾವಣೆಗಳು ನಾಳೆಯಿಂದ ಜಾರಿಗೆ ಬರಲಿವೆ.
ಐಟಿಆರ್ ಸಲ್ಲಿಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಐಟಿಆರ್ ಸಲ್ಲಿಸದವರು ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ. ಸರ್ಕಾರ, ಆದಾಯ ತೆರಿಗೆ ಕಾಯ್ದೆಗೆ ಸೆಕ್ಷನ್ 206 ಎಬಿ ಯನ್ನು ಸೇರಿಸಿದೆ. ಇನ್ನೂ ಐಟಿಆರ್ ಸಲ್ಲಿಸದಿದ್ದರೆ ಏಪ್ರಿಲ್ 1, 2021 ರಿಂದ ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ. ಹೊಸ ನಿಯಮಗಳ ಪ್ರಕಾರ ಜುಲೈ 1, 2021 ರಿಂದ ದಂಡದ ಟಿಡಿಎಸ್ ಮತ್ತು ಟಿಸಿಎಲ್ ದರಗಳು ಶೇಕಡಾ 10-20ರಷ್ಟಾಗಲಿದೆ. ಇದು ಸಾಮಾನ್ಯವಾಗಿ ಶೇಕಡಾ 5-10ರಷ್ಟಿರುತ್ತಿತ್ತು.
2020-21ರ ಬಜೆಟ್‌ನಲ್ಲಿ ಸರ್ಕಾರ ಹೊಸ ಆದಾಯ ತೆರಿಗೆ ನಿಯಮವನ್ನು ಪರಿಚಯಿಸಿದೆ. ಏಪ್ರಿಲ್ 1 ರಿಂದ ಇದು ಜಾರಿಗೆ ಬರಲಿದೆ. ಇದು ಐಚ್ಛಿಕವಾಗಿರುತ್ತದೆ. ಅಂದರೆ, ತೆರಿಗೆದಾರನು ಬಯಸಿದರೆ ಮಾತ್ರ ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ಹಳೆ ತೆರಿಗೆ ಸ್ಲ್ಯಾಬ್ ಪ್ರಕಾರವೂ ಆದಾಯ ತೆರಿಗೆಯನ್ನುಪಾವತಿಸಬಹುದು. ಹೊಸ ನಿಯಮದ ಪ್ರಕಾರ, ವಾರ್ಷಿಕ 5 ಲಕ್ಷ ರೂಪಾಯಿಗಿಂತ ಕಡಿಮೆ ಇರುವವರು ತೆರಿಗೆ ಪಾವತಿಸಬೇಕಾಗಿಲ್ಲ.
75 ವರ್ಷ ಮೇಲ್ಪಟ್ಟ ಜನರಿಗೆ ತೆರಿಗೆಯಿಂದ ರಿಯಾಯಿತಿ ಸಿಕ್ಕಿದೆ. ಏಪ್ರಿಲ್ 1 ರಿಂದ 75 ವರ್ಷ ಮೇಲ್ಪಟ್ಟ ಜನರು ತೆರಿಗೆ ಪಾವತಿಸಬೇಕಾಗಿಲ್ಲ.
ಏಪ್ರಿಲ್ ಒಂದರಿಂದ ಪಿಎಫ್ ತೆರಿಗೆ ನಿಯಮದಲ್ಲೂ ಬದಲಾವಣೆಯಾಗಲಿದೆ. ಒಂದು ವರ್ಷದಲ್ಲಿ ಪಿಎಫ್ ಖಾತೆಗೆ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಹೂಡಿಕೆ ಮಾಡಿದರೆ ತೆರಿಗೆ ಪಾವತಿಸಬೇಕಾಗುತ್ತದೆ. ಪಿಎಫ್ ಹೂಡಿಕೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುವುದು. ಆರ್ಥಿಕ ವರ್ಷದಲ್ಲಿ ಪಿಎಫ್ ಖಾತೆಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ ಹೂಡಿಕೆ ಮಾಡಿದವರು ತೆರಿಗೆಯಿಂದ ವಿನಾಯಿತಿ ಪಡೆಯಲಿದ್ದಾರೆ. ಈ ಹಿಂದೆ ಪಿಎಫ್ ಹೂಡಿಕೆ ಮೇಲಿನ ಬಡ್ಡಿ ತೆರಿಗೆ ವ್ಯಾಪ್ತಿಯಿಂದ ಹೊರಗಿತ್ತು.