ವ್ಯಾಸಂಗಕ್ಕಾಗಿ ಅಥವಾ ಕೆಲಸಕ್ಕೆ ಅಂತಾ ವಿದೇಶದಲ್ಲಿರುವವರು ಅಲ್ಲಿ ವಾಹನವನ್ನ ಚಲಾಯಿಸಬೇಕು ಅಂದರೆ ಐಡಿಪಿಯನ್ನ ಹೊಂದಿರೋದು ಕಡ್ಡಾಯ. ಮೊದಲು ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಬೇಕು ಅಂದರೆ ನೀವು ವೀಸಾವನ್ನ ಹೊಂದಿರಲೇಬೇಕಿತ್ತು. ಆದರೆ ಇದೀಗ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯ ಈ ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆಯೊಂದನ್ನ ಜಾರಿಗೆ ತಂದಿದೆ.
ಇದರ ಅರ್ಥ ಅರ್ಜಿದಾರನ ಬಳಿ ಪಾಸ್ಪೋರ್ಟ್ ಇದೆ ಎಂದಾದರೆ ಆತನ ವೀಸಾ ಅರ್ಜಿಯ ಆಧಾರದ ಮೇಲೆಯೇ ಅಂತಾರಾಷ್ಟ್ರೀಯ ಚಾಲನಾ ಪರವಾನಿಗೆ ಸಿಗಲಿದೆ. ಇಲ್ಲಿಯವರೆಗೆ ನೀವು ಐಡಿಪಿಯನ್ನ ಪಡೆಯಬೇಕು ಅಂದರೆ ಫೋಟೋ, ಡಿಎಲ್, ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ವೀಸಾದ ಫೋಟೋ ಕಾಪಿ ಹೊಂದಿರಲೇಬೇಕಿತ್ತು. ಇದಿಷ್ಟು ದಾಖಲೆಗಳನ್ನ ಸಲ್ಲಿಸಿದ ಬಳಿಕವೂ ವೀಸಾ ಇಲ್ಲದ ಕಾರಣ ಐಡಿಪಿ ಸಿಗುತ್ತಿರಲಿಲ್ಲ. ಆದರೆ ಈಗ ಹೊಸ ನಿಯಾಮವಳಿಗಳ ಅನ್ವಯ ನೀವು ವೀಸಾ ಹಾಗೂ ಪಾಸ್ಪೋರ್ಟ್ಗೆ ಸಲ್ಲಿಸಿದ ಅರ್ಜಿಯ ಕಾಪಿ ನೀಡುವ ಮೂಲಕವೇ ಐಡಿಪಿ ಪಡೆಯಬಹುದಾಗಿದೆ.
ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯ ಐಡಿಪಿಯ ಶುಲ್ಕದಲ್ಲೂ ಬದಲಾವಣೆ ಮಾಡಿದೆ. ಐಡಿಪಿ ಅರ್ಜಿಗೆ 1 ಸಾವಿರ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ ಎಂದು ಮಾಧ್ಯಮಗಳು ತಿಳಿಸಿವೆ. ಐಡಿಪಿಯ ಅವಧಿ ಮೀರಿದ್ದರೂ ಸಹ ಆ ವ್ಯಕ್ತಿ ವಿದೇಶದಲ್ಲಿ ಇದ್ದುಕೊಂಡೇ ರಾಯಭಾರಿ ಕಚೇರಿಯ ಮೂಲಕ ಐಡಿಪಿ ನವೀಕರಣ ಮಾಡಬಹುದಾಗಿದೆ. ಇದಕ್ಕೆ ಹೆಚ್ಚುವರಿ 2 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಐಡಿಪಿ ನವೀಕರಣಕ್ಕಾಗಿ ಅರ್ಜಿದಾರ ಡಿಎಲ್, ಫೋಟೋ, ಐಡಿ ಪ್ರೂಫ್ ಹಾಗೂ ಪಾಸ್ಪೋರ್ಟ್ಗಳನ್ನ ಸಲ್ಲಿಸಬೇಕು.