ಪ್ರಧಾನ ಮಂತ್ರಿ ಜನಧನ ಖಾತೆಗೆ ಈವರೆಗೆ 41 ಕೋಟಿಗೂ ಅಧಿಕ ಮಂದಿ ಫಲಾನುಭವಿಗಳಾಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಈ ಸಂಬಂಧ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವಾಲಯ ದೇಶದಲ್ಲಿ 41.6 ಕೋಟಿ ಮಂದಿಗೆ ಪ್ರಧಾನ ಮಂತ್ರಿ ಜನಧನ ಯೋಜನೆಯ ಲಾಭ ದೊರಕಿದೆ. 2015ರಲ್ಲಿ 58 ಪ್ರತಿಶತವಿದ್ದ ಶೂನ್ಯ ಉಳಿತಾಯದ ಖಾತೆಗಳ ಪ್ರಮಾಣ 2021 ಜನವರಿ ವೇಳೆಗೆ 7.5 ಪ್ರತಿಶತದಷ್ಟಾಗಿದೆ. ಇದರ ಅರ್ಥ ದೇಶದ ಬಹುಪಾಲು ಜನಧನ ಖಾತೆದಾರ ಬ್ಯಾಂಕ್ ಖಾತೆಯನ್ನ ಬಳಕೆ ಮಾಡಲು ಆರಂಭಿಸಿದ್ದಾನೆ ಅನ್ನೋದು ಸ್ಪಷ್ಟವಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.
2014ರಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಭಾಷಣ ಮಾಡುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಜನಧನ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದೇ ತಿಂಗಳ ಆಗಸ್ಟ್ 28ರಂದು ಈ ಯೋಜನೆಯನ್ನ ಶುರು ಮಾಡಲಾಗಿತ್ತು. ಕೇಂದ್ರ ಸರ್ಕಾರ 2018ರಲ್ಲಿ ಈ ಯೋಜನೆಯಲ್ಲಿ ಇನ್ನಷ್ಟು ಪ್ರಯೋಜನಗಳನ್ನೂ ನೀಡಲಾಗಿತ್ತು.
ಅಂದಹಾಗೆ ಈ ಜನಧನ ಖಾತೆಯನ್ನು ತೆರೆಯೋದು ಬಹಳ ಸುಲಭ. ನಿಮ್ಮ ಬಳಿ ಇಲ್ಲಿಯವರೆಗೆ ಯಾವುದೇ ಬ್ಯಾಂಕ್ ಖಾತೆ ಇಲ್ಲವಾದಲ್ಲಿ ನೀವು ಜನಧನ ಖಾತೆಯನ್ನ ಆರಂಭಿಸಬಹುದು. ಇದಕ್ಕಾಗಿ ನಿಮಗೆ ಬ್ಯಾಂಕ್ನಲ್ಲಿ ಅರ್ಜಿಯೊಂದನ್ನ ಭರ್ತಿ ಮಾಡಬೇಕಾಗುತ್ತದೆ. ಇದರಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ನ ಶಾಖೆಯ ಹೆಸರು, ವಿಳಾಸ, ನಾಮಿನಿ, ಹಾಗೂ ಕುಟುಂಬಸ್ಥರ ವಿವರ, ವಾರ್ಡ್ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಯನ್ನ ನೀಡಬೇಕು.
ಭಾರತದ ಯಾವುದೇ ನಾಗರಿಕ ಜನಧನ ಖಾತೆಯನ್ನ ಆರಂಭಿಸಬಹುದಾಗಿದೆ. ಖಾತೆದಾರದ ವಯಸ್ಸು 10 ವರ್ಷ ಮೀರಿದ್ದರೆ ಸಾಕು. ಯಾವುದೇ ಹತ್ತಿರದ ಬ್ಯಾಂಕ್ಗೆ ಹೋಗಿ ನೀವು ಈ ಖಾತೆಯನ್ನ ತೆರೆಯಬಹುದು. ಈ ಖಾತೆ ತೆರೆದ 6 ತಿಂಗಳ ಬಳಿಕ ನಿಮಗೆ 10 ಸಾವಿರ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದೆ.