ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ಹಾಲಿನ ಉತ್ಪಾದನೆಯಲ್ಲಿ ರೈತರಿಗೆ ಪ್ರಸ್ತುತ ಉಂಟಾಗುತ್ತಿರುವ ವೆಚ್ಚವನ್ನು ತಗ್ಗಿಸಲು ಮಾರ್ಗೋಪಾಯಗಳೊಂದಿಗೆ ರಿಯಾಯಿತಿಯನ್ನು ಜಾರಿಗೊಳಿಸುತ್ತಿದೆ.
ಜನವರಿ 2021 ರಿಂದ ಪ್ರತಿ ಟನ್ ಪಶುಆಹಾರದ ಖರೀದಿ ಬೆಲೆಯಲ್ಲಿ 1 ಸಾವಿರ ರೂಪಾಯಿ ಕಡಿಮೆಯಾಗಲಿದೆ. ಈ ಮೂಲಕ ರೈತರಿಗೆ ವೆಚ್ಚದಲ್ಲಿ ಕಡಿತ ಮಾಡಿ ಆದಾಯದಲ್ಲಿ ಹೆಚ್ಚಳ ಮಾಡಲು ಕೆಎಂಎಫ್ ಕ್ರಮಕೈಗೊಂಡಿದೆ. ಪಶು ಆಹಾರ ಉತ್ಪಾದನೆಗೆ ಅವಶ್ಯಕವಾದ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತದೆ. ಪ್ರತಿ ಕ್ವಿಂಟಾಲ್ ಗೆ 1560 ರೂಪಾಯಿ ದರದಲ್ಲಿ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಲಾಗುತ್ತದೆ.
ಹಸುಗಳು ಗರ್ಭಧರಿಸುವ ಮತ್ತು ಹಾಲು ಇಳುವರಿ ಕಡಿಮೆಯಾಗುವ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗುಣಮಟ್ಟದ ಚಿಲೇಟೆಡ್ ಖನಿಜ ಮಿಶ್ರಣ ಉತ್ಪಾದನೆ ಆರಂಭಿಸಲಾಗಿದೆ. ಧಾರವಾಡ ಮತ್ತು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನೂತನ ಪಶು ಆಹಾರ ಘಟಕ ಸ್ಥಾಪಿಸಲಾಗಿದೆ. ದೇಸಿ ಹಸುವಿನ ಹಾಲು ಶೇಖರಣೆ ಮತ್ತು ಮಾರಾಟಕ್ಕೆ ಕ್ರಮಕೈಗೊಳ್ಳಲಾಗಿದೆ. ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಮ್ಯಾಟ್ ಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಪೂರೈಕೆ ಮಾಡಲಾಗುವುದು.