ಬೆಂಗಳೂರು: ಹೊಸ ವರ್ಷಕ್ಕೆ ಮೊದಲೇ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ವಿದ್ಯುತ್ ದರ ಇಳಿಕೆಗೆ ಚಿಂತನೆ ನಡೆದಿದೆ.
ಗೃಹ ಬಳಕೆ ಸೇರಿದಂತೆ ಎಲ್ಲಾ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ದರ ಕಡಿತ ಮಾಡಲು ಚಿಂತನೆ ನಡೆದಿದೆ. ಬಳಕೆದಾರರ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಪ್ರತಿ ಯೂನಿಟ್ ಗೆ 70 ಪೈಸೆಯಿಂದ ಎರಡು ರೂಪಾಯಿವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗಿದೆ.
ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ರಿಯಾಯಿತಿ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡಲಾಗುತ್ತದೆ. 50 ಯೂನಿಟ್ ವರೆಗೆ ಲೈಫ್ ಲೈನ್ ಬಳಕೆಯಲ್ಲಿ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ ವಿಧಿಸುತ್ತಿದ್ದ 4.15 ರೂ. ಮತ್ತು 4.05 ರೂ. ಬದಲಿಗೆ 3.6 ರೂ. ಶುಲ್ಕ ವಿಧಿಸಲು ಚಿಂತನೆ ನಡೆದಿದೆ.
50 ರಿಂದ 200 ಯೂನಿಟ್ ವರೆಗಿನ ಸ್ಲ್ಯಾಬ್ ವಿಲೀನಗೊಳಿಸಿ ಆರಂಭಿಕ ದರ ಯೂನಿಟ್ ಗೆ 3.60 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ನಂತರದ ಯೂನಿಟ್ ಗಳಿಗೆ 4.60 ರೂ. ಶುಲ್ಕ ವಿಧಿಸಲಾಗುವುದು. 200 ಯೂನಿಟ್ ಗಿಂತ ಹೆಚ್ಚಿನ ಬಳಕೆಗೆ 7 ರೂ. ದರ ವಿಧಿಸುವ ಸಾಧ್ಯತೆ ಇದ್ದು, ಕೈಗಾರಿಕೆಗಳಿಗೂ ಈ ಸೌಲಭ್ಯ ಸಿಗಲಿದೆ.
ಅನಗತ್ಯ ವೆಚ್ಚಗಳಿಗೆ ಕಡಿವಾಳ ಹಾಕಿ ಗ್ರಾಹಕ ಸ್ನೇಹಿಯಾಗಿ ಜನಪರ ನಿಲುವು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಳಕೆದಾರರ ಶುಲ್ಕ ಇಳಿಕೆಗೆ ಚಿಂತನೆ ನಡೆದಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.