ನವದೆಹಲಿ: ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಬೆಲೆಏರಿಕೆ ಜನಸಾಮಾನ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಆಹಾರ ಮಾತ್ರವಲ್ಲ, ವಿವಿಧ ಅಗತ್ಯ ವಸ್ತುಗಳ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಕಡಿಮೆ ಆದಾಯ ಮತ್ತು ಹೆಚ್ಚುತ್ತಿರುವ ವೆಚ್ಚಗಳ ನಡುವೆ, ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈಗ ಜಿ.ಎಸ್.ಟಿ. ಹೆಚ್ಚಳದ ನಂತರ ಮನೆಯ ಬಜೆಟ್ ಮತತ್ಷ್ಟು ಹೆಚ್ಚಳವಾಗಲಿದೆ.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಮುಂದಿನ ವಾರದಿಂದ ಕೆಲವು ಸೇವೆಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.
ಜುಲೈ 18 ರಿಂದ ಹಲವಾರು ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ. ದಿನನಿತ್ಯದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ.
ಚೀಸ್, ಲಸ್ಸಿ, ಬೆಣ್ಣೆ ಹಾಲು, ಪ್ಯಾಕೇಜ್ ಮಾಡಿದ ಮೊಸರು, ಗೋಧಿ ಹಿಟ್ಟು, ಇತರ ಧಾನ್ಯಗಳು, ಜೇನುತುಪ್ಪ, ಪಾಪಡ್, ಧಾನ್ಯಗಳು, ಮಾಂಸ ಮತ್ತು ಮೀನು, ಬೆಲ್ಲದಂತಹ ಪ್ಯಾಕ್ ಮಾಡಿದ ಉತ್ಪನ್ನಗಳ ಬೆಲೆಗಳು ಜುಲೈನಿಂದ ಏರಿಕೆಯಾಗಲಿವೆ. ಈ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಬ್ರ್ಯಾಂಡೆಡ್ ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತಿದೆ. ಪ್ಯಾಕ್ ಗಳಿಲ್ಲದ ಮತ್ತು ಲೇಬಲ್ ಇಲ್ಲದ ಉತ್ಪನ್ನಗಳು ತೆರಿಗೆ ಮುಕ್ತವಾಗಿವೆ.
ಟೆಟ್ರಾ ಪ್ಯಾಕ್ ಮೊಸರು, ಲಸ್ಸಿ ಮತ್ತು ಬೆಣ್ಣೆ ಹಾಲಿಗೆ ಜುಲೈ 18 ರಿಂದ 5% ಜಿಎಸ್‌ಟಿ ವಿಧಿಸಲಾಗಿರುವುದರಿಂದ ಬೆಲೆ ಏರಿಕೆಯಾಗಲಿದೆ.
ಚೆಕ್ ಬುಕ್ ಗಳನ್ನು ನೀಡಲು ಬ್ಯಾಂಕ್ ಮೊದಲು ವಿಧಿಸುತ್ತಿದ್ದ ಸೇವಾ ತೆರಿಗೆಯು ಈಗ 18% ಜಿ.ಎಸ್.ಟಿ. ಅನ್ವಯಿಸಲಿದೆ.
ಆಸ್ಪತ್ರೆಗಳಲ್ಲಿ 5,000 ರೂ.ಗಿಂತ ಹೆಚ್ಚು ಮೌಲ್ಯದ ಕೊಠಡಿಗಳನ್ನು(ಐಸಿಯು ಅಲ್ಲದ) ಬಾಡಿಗೆಗೆ ನೀಡಿದರೆ 5 ಪ್ರತಿಶತ ಜಿ.ಎಸ್.ಟಿ. ವಿಧಿಸಲಾಗುತ್ತದೆ.
ಇವುಗಳ ಹೊರತಾಗಿ ಈಗ ಅಟ್ಲಾಸ್ ಗಳಿರುವ ನಕ್ಷೆಗಳಿಗೂ ಶೇ.12 ದರದಲ್ಲಿ ಜಿ.ಎಸ್.ಟಿ. ವಿಧಿಸಲಾಗುವುದು.
ದಿನಕ್ಕೆ 1,000 ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಶೇ 12 ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತದೆ.
ಎಲ್.ಇ.ಡಿ. ಲೈಟ್, ಎಲ್.ಇ.ಡಿ. ಲ್ಯಾಂಪ್ ಗಳು ಶೇಕಡಾ 18 ರಷ್ಟು ಜಿ.ಎಸ್.ಟಿ. ವ್ಯಾಪ್ತಿಗೆ ಸೇರಿವೆ.
ಬ್ಲೇಡ್ ಗಳು, ಪೇಪರ್ ಕತ್ತರಿಸುವ ಕತ್ತರಿ, ಪೆನ್ಸಿಲ್ ಶಾರ್ಪನರ್, ಚಮಚಗಳು, ಫೋರ್ಕ್ ಗಳು, ಸ್ಕಿಮ್ಮರ್‌ಗಳು ಮತ್ತು ಕೇಕ್-ಸರ್ವರ್‌ಗಳು ಈ ಹಿಂದೆ ಶೇಕಡಾ 12 ರ ಜಿ.ಎಸ್.ಟಿ. ಹೊಂದಿದ್ದು, ಅದೀಗ ಶೇಕಡ 18 ಕ್ಕೆ ಏರಿಕೆಯಾಗಲಿದೆ.