ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಈ ಬಾರಿ ತೊಗರಿ ಉತ್ಪಾದನೆ ಕುಂಠಿತವಾಗಿದ್ದು, ಪೂರೈಕೆ ಕಡಿಮೆಯಾಗಿರುವುದರಿಂದ ತೊಗರಿ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ರೈತರಿಗೆ ಖುಷಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಕ್ವಿಂಟಲ್ ತೊಗರಿಗೆ 9,600 ರೂಪಾಯಿವರೆಗೆ ದರ ಇದ್ದು, ಕೆಲವೇ ದಿನಗಳಲ್ಲಿ 11 ರಿಂದ 12 ಸಾವಿರಕ್ಕೆ ತಲುಪುವ ಸಾಧ್ಯತೆ ಇದೆ. ಮಾರುಕಟ್ಟೆಗೆ ತೊಗರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಆಗತೊಡಗಿದೆ. ತೊಗರಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ರೈತರಿಗೆ ಬಂಪರ್ ಬೆಲೆ ಸಿಗತೊಡಗಿದೆ.
ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಹೆಚ್ಚಾಗಿ ಜನಸಾಮಾನ್ಯರಿಗೆ ಬಿಸಿ ತಟ್ಟತೊಡಗಿದೆ. ಪ್ರಸ್ತುತ ತೊಗರಿ ಬೇಳೆ ದರ ಕೆಜಿಗೆ 120 ರಿಂದ 130 ರೂ. ಇದ್ದು, ಕೆಲವೇ ದಿನಗಳಲ್ಲಿ 150 ರಿಂದ 170 ರೂ. ದಾಟಬಹುದು ಎಂದು ಹೇಳಲಾಗಿದೆ.