ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆದಂತೆ ಬೇಳೆ ಕಾಳುಗಳ ದರ ಹೆಚ್ಚಾಗತೊಡಗಿದೆ. ದೀಪಾವಳಿ ವೇಳೆಗೆ ತೊಗರಿ ಬೇಳೆ ದರ ಪ್ರತಿ ಕೆಜಿಗೆ 200 ರೂಪಾಯಿ ದಾಟುವ ಸಾಧ್ಯತೆ ಇದೆ.
ಮಳೆಗಾಲದಲ್ಲಿ ಬೇಳೆಕಾಳುಗಳ ಬೆಲೆ ಈ ರೀತಿ ಏರಿಕೆ ಕಂಡಿರುವುದು ಅತಿ ಕಡಿಮೆ ಎನ್ನಬಹುದು. ರಾಜ್ಯದಲ್ಲಿ ಬರದ ಛಾಯೆ ಆವರಿಸಿರುವುದರಿಂದ ಬೇಳೆ ಕಾಳುಗಳ ಬೆಲೆ ಏರಿಕೆಯಾಗತೊಡಗಿದೆ ಮಾರುಕಟ್ಟೆಗಳಿಗೆ ಪೂರೈಕೆ ಕಡಿಮೆಯಾಗಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ತೊಗರಿ ಬೇಳೆ ದರ ಗಣಪತಿ ಹಬ್ಬದ ಸಂದರ್ಭದಲ್ಲಿ 180 ರೂ.ಗೆ ಏರಿಕೆಯಾಗಿತ್ತು.
ಕಡಲೆ ಬೇಳೆ ಕೆಜಿಗೆ 80 ರೂ.ವರೆಗೂ ಹೆಚ್ಚಳ ಆಗಿದೆ. ನವರಾತ್ರಿ, ದಸರಾ. ವಿಜಯದಶಮಿ. ದೀಪಾವಳಿ ಹೀಗೆ ಹಬ್ಬಗಳ ಸಾಲು ಎದುರಾಗುತ್ತಿದ್ದು, ಬೇಳೆ ಕಾಳುಗಳ ದರ ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.
ಒಂದು ತಿಂಗಳ ಹಿಂದೆಯಷ್ಟೇ ತೊಗರಿ ಬೇಳೆ, ಶೇಂಗಾ, ಬಟಾಣಿ, ಉದ್ದು, ಹೆಸರುಬೇಳೆ ದರ ಏರಿಕೆಯಾಗಿತ್ತು. ಅದು ಹಾಗೆಯೇ ಮುಂದುವರೆದಿದೆ. ತೊಗರಿ ಬೇಳೆ ದರ ದೀಪಾವಳಿ ಬೇಳೆಗೆ ಕೆಜಿಗೆ 200 ರೂಪಾಯಿ ದಾಟುವ ಸಾಧ್ಯತೆ ಇದೆ.
ಒಂದು ತಿಂಗಳ ಹಿಂದೆ 150 ರಿಂದ 150 ರೂ ಇದ್ದ ತೊಗರಿ ಬೇಳೆ ದರ ಈಗ 180 ರೂ.ಗೆ ಮಾರಾಟವಾಗುತ್ತಿದೆ. ಉದ್ದಿನ ಬೇಳೆ 140 ರೂ., ಶೇಂಗಾ 140 ರೂ., ಬಟಾಣಿ 120 ರೂ., ಹೆಸರುಬೇಳೆ 130 ರೂ., ಮಡಿಕೆ ಕಾಳು 120 ರೂ., ಕಡಲೆ ಬೇಳೆ 80 ರೂ. ಹೀಗೆ ಪ್ರತಿ ಬೇಳೆ ಕಾಳುಗಳ ದರ ಕೂಡ 10 ರಿಂದ 20 ರೂಪಾಯಿಯಷ್ಟು ಹೆಚ್ಚಳವಾಗಿದೆ. ಅದರಲ್ಲೂ ದಿನಬಳಕೆಯ ತೊಗರಿ ಬೇಳೆ ದರ ಏರಿಕೆ ಆಗಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.