ಕಲಬುರಗಿ: ಗಗನಕ್ಕೇರಿದ್ದ ತೊಗರಿ ಬೇಳೆ ದರ ದಿಢೀರ್ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ದರ ಕುಸಿತ ಆಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ತೊಗರಿ ಬೇಳೆ ಉತ್ತಮ ದರ ಬಂದಿದ್ದರಿಂದ ರೈತರು ಖುಷಿಯಲ್ಲಿದ್ದರು. ಕಾಳಸಂತೆಕೋರರು ಹೆಚ್ಚಿನ ಲಾಭ ಪಡೆಯುವ ದುರಾಲೋಚನೆಯಿಂದ ಕೃತಕ ದರ ಕುಸಿತ ಸೃಷ್ಟಿಸಿ ದಾಸ್ತಾನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಗುಮಾನಿ ಇದೆ.
ಕಲಬುರಗಿ ಮಾರುಕಟ್ಟೆಯಲ್ಲಿ 12ರಿಂದ 14 ಸಾವಿರ ರೂಪಾಯಿ ಗಡಿ ದಾಟಿದ್ದ ತೊಗರಿ ದರ ಏಕಾಏಕಿ 8000- 8,500 ರೂ.ಗೆ ಕುಸಿತವಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಖರೀದಿ ಕೇಂದ್ರ ತೆರೆದಿಲ್ಲ. ಸರ್ಕಾರ ಬೆಲೆ ಕುಸಿತವಾದಾಗ ಮಧ್ಯಪ್ರವೇಶಿಸಿಲ್ಲ ಎಂದು ರೈತರು ದೂರಿದ್ದಾರೆ.
ಬೆಲೆ ಏರಿಳಿತ ನಿಯಂತ್ರಣ ಮಾಡಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೆಲೆ ಸ್ಥಿರೀಕರಣ ಯೋಜನೆ ಜಾರಿಗೊಳಿಸಿದೆ. ಮಾರುಕಟ್ಟೆ ದರದಲ್ಲಿ ತೊಗರಿ ಖರೀದಿಸುವ ಚಿಂತನೆ ಇದೆ. ರೈತರಿಂದ ಕೇಂದ್ರದ ನಾಫೆಡ್ ಮತ್ತು ರಾಜ್ಯದ ಕರ್ನಾಟಕ ಕೃಷಿ ಸಹಕಾರ ಮಾರಾಟ ಮಂಡಳಿ ಮೂಲಕ ನೇರವಾಗಿ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರದ ಬೆಂಬಲ ಬೆಲೆ 7000 ರೂ. ಇದ್ದು, ರಾಜ್ಯ ಸರ್ಕಾರ ಪ್ರೋತ್ಸಾಹ ಧನವಾಗಿ 500 ರೂಪಾಯಿ ನೀಡಿದಲ್ಲಿ 7500 ರೂ. ಆಗಲಿದೆ. ಮಾರುಕಟ್ಟೆ ದರ 8500 ರೂ.ವರೆಗೆ ಇದ್ದು, ಈ ಬೆಲೆಯಲ್ಲಿ ಸರ್ಕಾರ ಖರೀದಿಗೆ ಮುಂದಾದದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರೀಕರಣ ಆಗಲಿದೆ.
ವಾರದ ಹಿಂದೆ ಒಂದು ಕೆಜಿ ತೊಗರಿ ಬೆಳೆ ದರ 160 ರೂಪಾಯಿ ಆಸು ಪಾಸಿನಲ್ಲಿತ್ತು. ಹೊಸದಾಗಿ ತೊಗರಿ ಬೇಳೆ ಆಗಮನ, ಕೇಂದ್ರ ಸರ್ಕಾರ ಭಾರತ್ ಬ್ರಾಂಡ್ ಹೆಸರಲ್ಲಿ ತೊಗರಿ ಬೆಳೆ ವಿತರಿಸುತ್ತಿರುವುದರಿಂದ ಒಂದು ಕೆಜಿ ತೊಗರಿ ಬೇಳೆ ದರ 120 ರೂಪಾಯಿಗೆ ಇಳಿಕೆಯಾಗಿದೆ. ತಿಂಗಳ ಹಿಂದೆ 200 ರೂಪಾಯಿವರೆಗೂ ತಲುಪಿದ್ದ ತೊಗರಿ ಬೇಳೆ ದರ ಈಗ 120 -140 ರೂಪಾಯಿಗೆ ಮಾರಾಟವಾಗುತ್ತಿದೆ. ಚಿಲ್ಲರೆ ದರ ಐದಾರು ರೂಪಾಯಿ ಹೆಚ್ಚಾಗಿದ್ದು, ಇನ್ನಷ್ಟು ಇಳಿಕೆಯಾಗಬಹುದು ಎಂದು ಹೇಳಲಾಗಿದೆ.