ನವದೆಹಲಿ: ಲಾಕ್ ಡೌನ್ ಸಂಪೂರ್ಣ ಸಡಿಲವಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ.
ಲಾಕ್ಡೌನ್ ತೆರವಾದ ನಂತರ ದೈನಂದಿನ ದರ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ಗೆ 4 -5 ರೂಪಾಯಿಯಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ವಿಶ್ವದೆಲ್ಲೆಡೆ ಕೊರೋನಾವೈರಸ್ ಕಾರಣದಿಂದ ಕಚ್ಚಾತೈಲದ ಬೆಲೆ ಇಳಿಕೆಯಾಗಿತ್ತು. ತೀವ್ರ ಕುಸಿತ ಕಂಡಿದ್ದ ಜಾಗತಿಕ ಕಚ್ಚಾತೈಲ ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಪೆಟ್ರೋಲಿಯಂ ದರ ಶೇಕಡ 50 ರಷ್ಟು ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಕಚ್ಚಾತೈಲದ ದರ ಏರಿಕೆ ಕಾಣುತ್ತಿದ್ದು ಇದು ಹೀಗೆಯೇ ಮುಂದುವರಿದಲ್ಲಿ ತೈಲ ಕಂಪನಿಗಳಿಗೆ ಮಾರಾಟ ಮತ್ತು ವೆಚ್ಚದ ನಡುವೆ 4 -5 ರೂಪಾಯಿಯಷ್ಟು ವ್ಯತ್ಯಾಸವಾಗುತ್ತದೆ. ಈ ನಷ್ಟವನ್ನು ಸರಿದೂಗಿಸಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿದಿನ ಲೀಟರ್ ಗೆ 40 ರಿಂದ 50 ಪೈಸೆಯಷ್ಟು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಜೂನ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 5 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.