ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಮುಕ್ತಾಯವಾಗಿದೆ.
ಸಭೆಯಲ್ಲಿ ಹಾಲಿನ ದರ ಏರಿಕೆ ಕುರಿತಾಗಿ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಹಣಕಾಸು ಇಲಾಖೆ ಎಸಿಎಸ್ ಐಎಸ್ ಎನ್. ಪ್ರಸಾದ್ ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಹಾಲಿನ ದರ ಏರಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ.
ಹಾಲಿನ ದರ ಏರಿಕೆ ಕುರಿತಂತೆ ಸಭೆ ನಡೆಸಿದ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ರೈತರು ಹಾಗೂ ಗ್ರಾಹಕರ ಹಿತ ಕಾಯಬೇಕಿದೆ. ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಗೆ ಕೆಲವು ಸಲಹೆ, ಸೂಚನೆ ನೀಡಿದ್ದೇನೆ ಎಂದರು.
ರೈತರಿಗೆ ಸಮಸ್ಯೆ ಆಗಬಾರದು, ಗ್ರಾಹಕರಿಗೂ ತೊಂದರೆ ಆಗಬಾರದು. ಹಾಲಿನ ದರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಯಾವ ರಾಜ್ಯದಲ್ಲಿ ಎಷ್ಟು ದರ ಇದೆ ಎಂಬ ಮಾಹಿತಿ ಪಡೆದಿದ್ದೇನೆ. ಕೆಎಂಎಫ್ ಸರ್ಕಾರದ ಅಂಗ, ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯ. ಕೆಎಂಎಫ್ ನವರು ಎರಡು ದಿನ ಸಮಯ ಕೇಳಿದ್ದಾರೆ ಎಂದು ಹೇಳಿದ್ದಾರೆ.
ಕೆಎಂಎಫ್ ಬೋರ್ಡ್ ಸಭೆ ಕರೆದು ತೀರ್ಮಾನ ಕೈಗೊಳ್ಳಲು ಹೇಳಿದ್ದೇನೆ. ರೈತರು, ಗ್ರಾಹಕರಿಗೆ ತೊಂದರೆ ಆಗದಂತೆ ಒಂದು ಸೂತ್ರ ರೂಪಿಸಿ ತೀರ್ಮಾನಿಸುವಂತೆ ತಿಳಿಸಿದ್ದೇನೆ. ನಿರ್ಧಾರ ಕೈಗೊಳ್ಳಲು ಕೆಎಂಎಫ್ ನವರು ಎರಡು ದಿನ ಸಮಯ ಕೇಳಿದ್ದಾರೆ ಎಂದರು.
ನವೆಂಬರ್ 14ರಂದು ಕೆಎಂಎಫ್ ಲೀಟರ್ ಹಾಲು, ಮೊಸರಿನ ದರ ಮೂರು ರೂಪಾಯಿ ಏರಿಕೆ ಮಾಡಿದ್ದು, ಸಿಎಂ ಬ್ರೇಕ್ ಹಾಕಿದ್ದರು. ಸದ್ಯಕ್ಕೆ ಹಾಲು ಮೊಸರಿನ ದರ ಹೆಚ್ಚಳ ಇಲ್ಲ. ಕೆಎಂಎಫ್ ಗೆ ಮುಖ್ಯಮಂತ್ರಿಗಳು ಎರಡು ದಿನ ಗಡುವು ನೀಡಿದ್ದಾರೆ. ರೈತರು, ಗ್ರಾಹಕರಿಗೆ ತೊಂದರೆ ಆಗದಂತೆ ನೀವೇ ನಿರ್ಧರಿಸಿ ಎಂದು ತಿಳಿಸಿದ್ದಾರೆ.