ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಸಾಕಷ್ಟು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆ ನೀಡುತ್ತಿದೆ.
ಓಲಾ ಕಂಪನಿಯ ಎಲೆಕ್ಟ್ರಿಕ್ ಬೈಕುಗಳಿಗೆ ಬೇಡಿಕೆ ಹೆಚ್ಚುತ್ತಿರೋದನ್ನು ನಾವು ಈಗಾಗಲೇ ಕಂಡಿದ್ದೇವೆ. ಈ ನಡುವೆ ಬೌನ್ಸ್ ಕಂಪನಿಯ ಕೂಡ ಭಾರತದಲ್ಲಿ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ 79,999 ರೂಪಾಯಿ ದರ ನಿಗದಿ ಮಾಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸಿಗುವ ಇವಿ ಸಬ್ಸಿಡಿ ಬಳಿಕ ಈ ಬೈಕುಗಳ ಬೆಲೆಯು 59,999 ರೂಪಾಯಿಗಳಷ್ಟಾಗಲಿದೆ. ಬ್ಯಾಟರಿ ಹಾಗೂ ಚಾರ್ಜರ್ ಸಮೇತ ಬೈಕುಗಳಿಗೆ ದರ ನಿಗದಿ ಮಾಡಲಾಗಿದೆ.
ಒಂದು ವೇಳೆ ನೀವು ಬ್ಯಾಟರಿ ಸೇವೆಯ ಆಯ್ಕೆಯನ್ನು ಆರಿಸಿಕೊಂಡಲ್ಲಿ ಸ್ಕೂಟರ್ನ ಬೆಲೆಯು ಸುಮಾರು 36 ಸಾವಿರ ರೂಪಾಯಿ ಆಗಿರಲಿದೆ. ಅಂದರೆ ಇಲ್ಲಿ ನೀವು ಬ್ಯಾಟರಿಗಳನ್ನು ಖರೀದಿಸದೇ ಸ್ಕೂಟರ್ನ್ನು ಖರೀದಿ ಮಾಡಬೇಕು. ಬಳಿಕ ಆ ಗ್ರಾಹಕರು ಕಂಪನಿಯಿಂದ ಬ್ಯಾಟರಿಯನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಈ ಆಯ್ಕೆಯು ಸಂಪೂರ್ಣ ಗ್ರಾಹಕರ ಮೇಲೆ ಅವಲಂಬಿತವಾಗಿರಲಿದೆ ಎಂದು ಕಂಪನಿ ಹೇಳಿದೆ.
ಬೌನ್ಸ್ ಇನ್ಫಿನಿಟಿಯು ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಯೊಂದಿಗೆ ಬರುತ್ತದೆ. ಪ್ರಾರಂಭಿಕ ಹಂತದಲ್ಲಿ 3500ಕ್ಕೂ ಅಧಿಕ ಸ್ಥಳಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಪಾರ್ಕ್ ಪ್ಲಸ್ನೊಂದಿಗೆ ಬೌನ್ಸ್ ಪಾಲುದಾರಿಕೆ ಹೊಂದಿದೆ. ಅಂದರೆ ನೀವು ಸ್ವಾಪಿಂಗ್ ಸ್ಟೇಷನ್ಗಳಲ್ಲಿ ಬ್ಯಾಟರಿ ಬಾಡಿಗೆಗೆ ಪಡೆದು ಖಾಲಿಯಾದ ಬಳಿಕ ಅದನ್ನು ಚಾರ್ಜ್ ಮಾಡಲಾದ ಬ್ಯಾಟರಿಯೊಂದಿಗೆ ಬದಲಾಯಿಸಿಕೊಳ್ಳಬಹುದಾಗಿದೆ. ಅಂದಹಾಗೆ ಈ ಸೇವೆಯು ಗ್ರಾಹಕರಿಗೆ ಉಚಿತವಾಗಿ ಸಿಗೋದಿಲ್ಲ ಎಂಬ ಅಂಶವು ನೆನಪಿನಲ್ಲಿಡಬೇಕು.