ಬ್ಯಾಂಕ್ ನಲ್ಲಿ ಠೇವಣಿ ಇಡುವ ಹಾಗೂ ವಿತ್ ಡ್ರಾ ಮಾಡುವ ಸೇವೆಗೆ ಇನ್ಮುಂದೆ ಶುಲ್ಕ ವಿಧಿಸಲಾಗುವುದು. ಉಚಿತ ಬ್ಯಾಂಕಿಂಗ್ ಸೇವೆ ಈ ತಿಂಗಳು ಕೊನೆಗೊಳ್ಳಲಿದೆ. ನವೆಂಬರ್ 1 ರಿಂದ ಬ್ಯಾಂಕಿನಲ್ಲಿ ಈ ಎರಡೂ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ. ನಿಯಮಗಳಲ್ಲಿ ಬದಲಾವಣೆಯ ನಂತರ, ಗ್ರಾಹಕರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇರಿಸಲು ಮತ್ತು ಹಿಂಪಡೆಯಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಸದ್ಯ ಬ್ಯಾಂಕ್ ಆಫ್ ಬರೋಡಾ ಶುಲ್ಕ ವಿಧಿಸಲಿದೆ. ಬ್ಯಾಂಕ್ ಆಫ್ ಇಂಡಿಯಾ, ಪಿಎನ್‌ಬಿ, ಆಕ್ಸಿಸ್ ಮತ್ತು ಸೆಂಟ್ರಲ್ ಬ್ಯಾಂಕ್ ಕೂಡ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದೆ. ನಿಗದಿತ ಮಿತಿಗಿಂತ ಹೆಚ್ಚು ಠೇವಣಿ ಅಥವಾ ವಿತ್ ಡ್ರಾ ಮಾಡಿದಾಗ ಮಾತ್ರ ಶುಲ್ಕ ವಿಧಿಸಲಾಗುವುದು.
ಚಾಲ್ತಿ ಖಾತೆ, ನಗದು ಕ್ರೆಡಿಟ್ ಮಿತಿ ಮತ್ತು ಓವರ್‌ಡ್ರಾಫ್ಟ್ ಖಾತೆಯಲ್ಲಿ ಹಣವನ್ನು ಠೇವಣಿ ಇರಿಸಲು ಮತ್ತು ಹಿಂಪಡೆಯಲು ಬ್ಯಾಂಕ್ ಆಫ್ ಬರೋಡಾ ನಿಗದಿತ ಶುಲ್ಕವನ್ನು ನಿಗದಿಪಡಿಸಿದೆ. ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಠೇವಣಿ ಹಿಂಪಡೆಯಲು ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಲಾಗಿದೆ. ಮುಂದಿನ ತಿಂಗಳಿನಿಂದ, ಮೂರಕ್ಕಿಂತ ಹೆಚ್ಚು ಬಾರಿ ಹಣ ಹಿಂಪಡೆದ್ರೆ ಪ್ರತಿ ಬಾರಿ 150 ರೂಪಾಯಿ ಶುಲ್ಕ ಪಾವತಿಸಬೇಕು.
ಉಳಿತಾಯ ಖಾತೆ ಗ್ರಾಹಕರು ತಿಂಗಳಲ್ಲಿ ಮೂರು ಬಾರಿ ಹಣವನ್ನು ಠೇವಣಿ ಇಡಬಹುದು. ನಾಲ್ಕನೇ ಬಾರಿ ಖಾತೆಗೆ ಜಮಾ ಮಾಡುವ ವೇಳೆ 40 ರೂಪಾಯಿಗಳನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೂ ಬ್ಯಾಂಕುಗಳು ಯಾವುದೇ ರಿಯಾಯಿತಿ ನೀಡಿಲ್ಲ. ಜನ ಧನ್ ಖಾತೆದಾರರು ಹಣವನ್ನು ಠೇವಣಿ ಇಡಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದರೆ ಹಿಂಪಡೆಯಲು 100 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.