ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದವರಿಗೆ ಇಲ್ಲೊಂದು ಪ್ರಮುಖ ಮಾಹಿತಿ ಇದೆ. ಈಗಾಗಲೇ ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ನ 3898 ಶಾಖೆಗಳ ವಿಲೀನಿಕರಣವನ್ನ ಪೂರ್ಣಗೊಳಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಮಾಹಿತಿ ನೀಡಿದೆ.
2020ರ ಡಿಸೆಂಬರ್ ವೇಳೆಗೆ 1770 ದೇನಾ ಬ್ಯಾಂಕ್ ಶಾಖೆಗಳನ್ನ ಹಾಗೂ 2020ರ ಸೆಪ್ಟೆಂಬರ್ ವೇಳೆಗೆ 2128 ವಿಜಯ ಬ್ಯಾಂಕ್ ಶಾಖೆಗಳನ್ನ ಬ್ಯಾಂಕ್ ಆಫ್ ಬರೋಡಾ ತನ್ನಲ್ಲಿ ವಿಲೀನ ಮಾಡಿಕೊಂಡಿದೆ.
ಕೊರೊನಾ ಸವಾಲುಗಳ ನಡುವೆಯೂ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ಗಳ ಏಕೀಕರಣವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಮ್ಮೆಲ್ಲ ಗ್ರಾಹಕರನ್ನ ಮತ್ತೊಮ್ಮೆ ಸ್ವಾಗತಿಸಲು ನಾವು ಸಜ್ಜಾಗುತ್ತಿದ್ದೇವೆ. ಬ್ಯಾಂಕ್ ಆಫ್ ಬರೋಡಾದ ಗ್ರಾಹಕರು ಆದಷ್ಟು ಡಿಜಿಟಲ್ ಬ್ಯಾಂಕಿಂಗ್ ಬಳಕೆ ಮಾಡಬೇಕೆಂದು ನಾವು ವಿನಂತಿಸುತ್ತೇವೆ. 5 ಕೋಟಿಗೂ ಹೆಚ್ಚು ಗ್ರಾಹಕರ ಖಾತೆಗಳನ್ನ ಸ್ಥಳಾಂತರಿಸಲಾಗಿದ್ದು ಶಾಖೆಗಳ ಜೊತೆಗೆ ಎಲ್ಲಾ ಎಟಿಎಂ, ಪಿಒಎಸ್ ಯಂತ್ರಗಳನ್ನ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ನಿರ್ದೇಶಕ ಸಿಇಓ ಸಂಜೀವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಎಲ್ಲಾ ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ನಡೆಸಲು ಅರ್ಹರಾಗಿದ್ದಾರೆ. ಹಾಗೂ ಹಿಂದಿನ ಬ್ಯಾಂಕ್ಗಳು ಈಗಾಗಲೇ ಗ್ರಾಹಕರಿಗೆ ನೀಡಿರುವ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳನ್ನ ಅವುಗಳ ನಿಗದಿತ ಅವಧಿ ಮುಗಿಯುವವರೆಗೆ ಬಳಕೆ ಮಾಡಬಹುದಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಮಾಹಿತಿ ನೀಡಿದೆ.