ಮರಾಠಿ ಭಾಷೆಯನ್ನ ಸಹಾಯವಾಣಿಗೆ ಸೇರಿಸುವಂತೆ ಮರಾಠಿಗರು ನಡೆಸಿದ ಅಭಿಯಾನದ ಬಳಿಕ ಎಚ್ಚೆತ್ತ ಅಮೆಜಾನ್ ಕಂಪನಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೇ ಮರಾಠಿ ಶಾಪಿಂಗ್ ಅನುಭವವನ್ನ ಪ್ರಾರಂಭಿಸುವ ಕೆಲಸವನ್ನ ಈಗಾಗಲೇ ಶುರು ಮಾಡಿದ್ದೇವೆ ಎಂದು ಸಂಸ್ಥೆ ಅಧಿಕೃತವಾಗಿ ಟ್ವೀಟ್ ಮಾಡಿದೆ. ಮರಾಠಿ ಮಾತ್ರವಲ್ಲದೇ ಗ್ರಾಹಕ ಹಾಗೂ ಮಾರಾಟಗಾರರ ನಡುವಿನ ಸಂಬಂಧವನ್ನ ಇನ್ನಷ್ಟು ಹೆಚ್ಚಿಸಲು ಮತ್ತಷ್ಟು ಭಾಷೆಗಳನ್ನ ಸೇರಿಸೋದಾಗಿ ಇ ಕಾಮರ್ಸ್ ಹೇಳಿದೆ.
ಮರಾಠಿ ಭಾಷೆಯ ಸಪೋರ್ಟ್ ಶೀಘ್ರದಲ್ಲೇ ಕಾರ್ಯಗತವಾಗಲಿದೆ ಎಂಬುದನ್ನ ತೋರಿಸೋಕೆ ಅಮೆಜಾನ್ ಟ್ವೀಟ್ನಲ್ಲಿ ಸ್ಕ್ರೀನ್ಶಾಟ್ನ್ನ ಶೇರ್ ಮಾಡಿದೆ. ಅಮೆಜಾನ್ನಲ್ಲಿ ಮರಾಠಿ ಭಾಷೆಯಲ್ಲಿ ಗ್ರಾಹಕ ಸೇವೆ ನೀಡುವಂತೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಮೆಜಾನ್ ಸಿಇಓ ಜೆಫ್ ಬೆಜೋಸ್ಗೆ ಮುಕ್ತ ಪತ್ರ ಬರೆದಿತ್ತು. ಮಹಾರಾಷ್ಟ್ರದ ಗ್ರಾಹಕರಿಗೆ ಈ ಸೇವೆಯನ್ನ ನೀಡದೇ ಇದ್ದರೆ ಅಮೆಜಾನ್ ವಿರುದ್ಧ ಆಂದೋಲನ ನಡೆಸೋದಾಗಿ ಎಚ್ಚರಿಕೆಯನ್ನೂ ನೀಡಿತ್ತು.
ಅಮೆಜಾನ್ ವಿರುದ್ಧ ಕಾನೂನು ಜಗಳಕ್ಕೆ ಇಳಿಯುವ ವಿಚಾರ ನಮ್ಮದಲ್ಲ. ಆದರೆ ಮಾತೃಭಾಷೆಗಾಗಿ ಮಹಾರಾಷ್ಟ್ರದ ಜನತೆ ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧ ಎಂದು ಸಾಮಾಜಿಕ ಜಾಲತಾಣಗಳಲ್ಲಿ (#NoMarathi_No Amazon) ಅಭಿಯಾನಗಳನ್ನೂ ನಡೆಸಿದ್ದರು.