
ನವದೆಹಲಿ: ಕಾರ್ ಗಳಲ್ಲಿ ಚಾಲಕನ ಪಕ್ಕದ ಸೀಟುಗಳಿಗೂ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕಡಿಮೆ ಬೆಲೆಯ ಕಾರುಗಳು ನಿಯಮ ಅನ್ವಯವಾಗಲಿದೆ.
ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಐಷಾರಾಮಿ, ದುಬಾರಿ ಕಾರುಗಳು ಮಾತ್ರವಲ್ಲದೆ ಕಡಿಮೆ ಬೆಲೆಯ ಕಾರ್ ಗಳಲ್ಲಿಯೂ ಚಾಲಕರ ಪಕ್ಕದ ಪ್ರಯಾಣಿಕರ ಸೀಟಿಗೆ ಕಡ್ಡಾಯವಾಗಿ ಏರ್ ಬ್ಯಾಗ್ ಅಳವಡಿಸಬೇಕಿದೆ.
ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ವಾಹನ ಉದ್ಯಮ ಗುಣಮಟ್ಟ ಸಮಿತಿಗೆ ಈ ಕುರಿತಾಗಿ ಸೂಚಿಸಲಾಗಿದೆ. 2019 ರ ಜುಲೈ 1 ರಿಂದಲೇ ಚಾಲಕರು ಕುಳಿತುಕೊಳ್ಳುವ ಸೀಟ್ ನಲ್ಲಿ ಏರ್ ಬ್ಯಾಗ್ ಕಡ್ಡಾಯ ಮಾಡಲಾಗಿದೆ. ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತವರು ಅಪಘಾತದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಅನೇಕ ಸಂದರ್ಭದಲ್ಲಿ ಜೀವಹಾನಿಯಾಗುತ್ತದೆ. ಈ ಕಾರಣಕ್ಕೆ ಡ್ರೈವರ್ ಪಕ್ಕದ ಸೀಟಿಗೆ ಕೂಡ ಏರ್ ಬ್ಯಾಗ್ ಕಡ್ಡಾಯಗೊಳಿಸಲಾಗುವುದು ಎಂದು ಹೇಳಲಾಗಿದೆ.