
ಟಿಆರ್‌ಪಿ ವಿವಾದದ ನಂತ್ರ ಮುಂದಿನ ಕೆಲವು ವಾರಗಳವರೆಗೆ ಸುದ್ದಿ ಚಾನೆಲ್ ಟಿಆರ್‌ಪಿ ಬಿಡುಗಡೆ ಮಾಡುವುದಿಲ್ಲವೆಂದು ಬ್ರೋಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಹೇಳಿದೆ. ಆದ್ರೆ ಸುದ್ದಿ ಚಾನೆಲ್‌ಗಳನ್ನು ಹೊರತುಪಡಿಸಿ, ಎಲ್ಲಾ ಮನರಂಜನಾ ಚಾನೆಲ್‌ಗಳು ಮತ್ತು ಪ್ರಾದೇಶಿಕ ಚಾನೆಲ್‌ಗಳ ರೇಟಿಂಗ್‌ಗಳು ಮೊದಲಿನಂತೆ ಸಿಗಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ತನ್ನ ವ್ಯವಸ್ಥೆಯನ್ನು ಪರಿಶೀಲಿಸಲು ಬಾರ್ಕ್ ಈ ಕ್ರಮವನ್ನು ತೆಗೆದುಕೊಂಡಿದೆ.
ರೇಟಿಂಗ್ ವಿವಾದದ ನಂತ್ರ ರೇಟಿಂಗ್ ಅಳೆಯುವ ಮಾಪಕಗಳನ್ನು ಪ್ರಸ್ತುತ ತಾಂತ್ರಿಕ ಸಮಿತಿಯು ಪರಿಶೀಲಿಸುತ್ತಿದೆ. ಡೇಟಾದ ಗುಣಮಟ್ಟವನ್ನು ಸುಧಾರಿಸಲಾಗುತ್ತದೆ. ಎಲ್ಲಾ ರಾಷ್ಟ್ರೀಯ, ಪ್ರಾದೇಶಿಕ ಮತ್ತು ವ್ಯವಹಾರ ಸುದ್ದಿ ಚಾನೆಲ್‌ಗಳ ರೇಟಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಲಾಗುತ್ತದೆ. ಇದಕ್ಕೆ 8-12 ವಾರ ಹಿಡಿಯಬಹುದೆಂದು ಬಾರ್ಕ್ ಹೇಳಿದೆ.
ಬಾರ್ಕ್ ಹಿಂದಿ, ಇಂಗ್ಲೀಷ್, ಪ್ರಾದೇಶಿಕ ಮತ್ತು ವಾಣಿಜ್ಯ ಸುದ್ದಿ ಚಾನೆಲ್ ಗಳ ರೇಟಿಂಗ್ ಬಿಡುಗಡೆ ಮಾಡುವುದಿಲ್ಲ. ಆದ್ರೆ ರಾಜ್ಯ ಹಾಗೂ ಭಾಷಾ ಸುದ್ದಿ ಚಾನೆಲ್ ಗಳ ಒಟ್ಟಾರೆ ಅಂಕಿಅಂಶವನ್ನು ಬಿಡುಗಡೆ ಮಾಡಲಿದೆ. ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್,ಬಾರ್ಕ್ ಈ ನಿರ್ಧಾರವನ್ನು ಸ್ವಾಗತಿಸಿದೆ.