ನವದೆಹಲಿ: ದೀಪಾವಳಿ ಹೊತ್ತಲ್ಲೇ ಗ್ರಾಹಕರಿಗೆ ಬರೆ ಬಿದ್ದಿದ್ದು ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಅಮುಲ್ ನಂತರ, ಮದರ್ ಡೈರಿ ಹಾಲಿನ ದರ ಹೆಚ್ಚಳ ಮಾಡಿದೆ.
ಅಮುಲ್ ಮಿಲ್ಕ್ ಹಾಲಿನ ದರವನ್ನು ಹೆಚ್ಚಿಸಿದ ಕೆಲವೇ ಗಂಟೆಗಳ ನಂತರ, ಮದರ್ ಡೈರಿ ಶನಿವಾರ ಪೂರ್ಣ ಕೆನೆ ಹಾಲು ಮತ್ತು ಹಸುವಿನ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ. ಹಾಲಿನ ದರ ಹೆಚ್ಚಳವು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಅಕ್ಟೋಬರ್ 16 ರಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ. ಮದರ್ ಡೈರಿಯು ಆಗಸ್ಟ್ 2022 ರಿಂದ ಎರಡನೇ ಬಾರಿಗೆ ಹಾಲಿನ ದರವನ್ನು ಹೆಚ್ಚಿಸಿದೆ.
ಇನ್‌ಪುಟ್ ವೆಚ್ಚದ ಹೆಚ್ಚಳದಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ ಎಂದು ಮದರ್ ಡೈರಿ ಹೇಳಿದೆ. ದೆಹಲಿ-ಎನ್.ಸಿ.ಆರ್.ನಲ್ಲಿ 3 ತಿಂಗಳಲ್ಲಿ ಎರಡನೇ ಬಾರಿಗೆ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ.
ಅಮುಲ್ ಬ್ರಾಂಡ್ ನಡಿಯಲ್ಲಿ ಹಾಲನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ(ಜಿಸಿಎಂಎಂಎಫ್), ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಮತ್ತು ಎಮ್ಮೆಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಉಳಿದ ಹಾಲು ಒಕ್ಕೂಟಗಳೂ ಹಾಲಿನ ದರ ಹೆಚ್ಚಿಸುವ ಸಾಧ್ಯತೆ ಇದೆ.