ಪೆಟ್ರೋಲ್-ಡೀಸೆಲ್, ತೈಲ ಸೇರಿದಂತೆ ಅನೇಕ ದಿನಬಳಕೆ ವಸ್ತುಗಳ ಬೆಲೆ ಈಗಾಗಲೇ ಏರಿಕೆ ಕಂಡಿದೆ. ಇದ್ರಿಂದ ಚೇತರಿಸಿಕೊಳ್ಳುವ ಮೊದಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಕಾದಿದೆ. ಏಪ್ರಿಲ್ ಒಂದರಿಂದ ಇನ್ನೊಂದಿಷ್ಟು ವಸ್ತುಗಳ ಬೆಲೆ ಏರಿಕೆಯಾಗಲಿದೆ. ಏಪ್ರಿಲ್ 1 ರಿಂದ ಹಾಲು, ಎಸಿ, ಫ್ಯಾನ್, ಟಿವಿ, ಸ್ಮಾರ್ಟ್ಫೋನ್ ಬೆಲೆಗಳು ಏರಿಕೆಯಾಗಲಿವೆ.
ಅಗತ್ಯ ವಸ್ತುಗಳಲ್ಲಿ ಒಂದಾದ ಹಾಲಿನ ಬೆಲೆ ಏಪ್ರಿಲ್ ಒಂದರಿಂದ ಹೆಚ್ಚಾಗಲಿದೆ. ವ್ಯಾಪಾರಿಗಳು ಹಾಲಿನ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಹಾಲಿನ ಬೆಲೆ ಲೀಟರ್‌ಗೆ 3 ರೂಪಾಯಿ ಹೆಚ್ಚಾಗಲಿದೆ. ಏಪ್ರಿಲ್ 1 ರಿಂದ ಪ್ರತಿ ಲೀಟರ್ ಹಾಲಿನ ಬೆಲೆ 49 ರೂಪಾಯಿಯಾಗಲಿದೆ.
ವಿಮಾನದಲ್ಲಿ ಪ್ರಯಾಣಿಸುವವರ ಜೇಬು ಬಿಸಿಯಾಗಲಿದೆ. ದೇಶೀಯ ವಿಮಾನ ದರಗಳ ಲೋವರ್ ಮಿತಿಯನ್ನು ಶೇಕಡಾ 5 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 1 ರಿಂದ ಏವಿಯೇಷನ್ ಸೆಕ್ಯುರಿಟಿ ಶುಲ್ಕ ಕೂಡ ಹೆಚ್ಚಾಗಲಿದೆ. ಏಪ್ರಿಲ್ 1 ರಿಂದ ದೇಶೀಯ ವಿಮಾನಗಳ ಭದ್ರತಾ ಶುಲ್ಕ 200 ರೂಪಾಯಿಯಾಗಲಿದೆ. ಪ್ರಸ್ತುತ ಇದು 160 ರೂಪಾಯಿಯಿದೆ.
ಏಪ್ರಿಲ್ 1 ರಿಂದ ಟಿವಿ ದುಬಾರಿಯಾಗಲಿದೆ. 2000 ದಿಂದ 3000 ರೂಪಾಯಿ ಹೆಚ್ಚಾಗಲಿದೆ. ಕಳೆದ 8 ತಿಂಗಳಲ್ಲಿ ಬೆಲೆಗಳು 3 ರಿಂದ 4 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ. ಆದ್ರೂ ಮತ್ತೆ ಟಿವಿ ಬೆಲೆ ಏರಿಸಲು ತಯಾರಕರು ಮುಂದಾಗಿದ್ದಾರೆ.
ಈ ವರ್ಷದ ಬೇಸಿಗೆಯಲ್ಲಿ ಎಸಿ, ಫ್ರಿಜ್ ಖರೀದಿಸುವುದು ಸುಲಭವಲ್ಲ. ಏಪ್ರಿಲ್‌ನಿಂದ ಎಸಿ ಕಂಪನಿಗಳು ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಕಂಪನಿಗಳು ಎಸಿ ಬೆಲೆಯನ್ನು ಹೆಚ್ಚಿಸಲು ತಯಾರಿ ನಡೆಸುತ್ತಿವೆ. ಎಸಿ ತಯಾರಿಸುವ ಕಂಪನಿಗಳು ಶೇಕಡಾ 4-6 ರಷ್ಟು ಬೆಲೆ ಹೆಚ್ಚಳಕ್ಕೆ ಮುಂದಾಗಿವೆ.
ಏಪ್ರಿಲ್‌ನಲ್ಲಿ ಕಾರು ಖರೀದಿ ಕೂಡ ದುಬಾರಿಯಾಗಲಿದೆ. ಜಪಾನಿನ ಕಂಪನಿ ನಿಸ್ಸಾನ್ ಕಾರಿನ ಬೆಲೆ ಹೆಚ್ಚಿಸುವ ಘೋಷಣೆ ಮಾಡಿದೆ. ಇದಲ್ಲದೆ ಏಪ್ರಿಲ್ 1 ರಿಂದ ರೆನಾಲ್ಟ್ ಕಿಗರ್ ಬೆಲೆ ಕೂಡ ದುಬಾರಿಯಾಗಲಿದೆ. ಮುಂದಿನ ತಿಂಗಳಿನಿಂದ ಟ್ರಾಕ್ಟರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಕೃಷಿ ಉಪಕರಣ ತಯಾರಕರಾದ ಎಸ್ಕೋರ್ಟ್ಸ್ ಲಿಮಿಟೆಡ್‌ನ, ಎಸ್ಕೋರ್ಟ್ಸ್ ಅಗ್ರಿ ಮೆಷಿನರಿ ವಿಭಾಗ ತಿಳಿಸಿದೆ.