ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಗುಜರಾತಿನ ನವಾಲ್‌ಬೆನ್ ದಲ್ಸಾಂಭಾಯ್ ಚೌಧರಿ ಎಂಬ 62 ವರ್ಷದ ಮಹಿಳೆ ಜ್ವಲಂತ ನಿದರ್ಶನ.
ಹಾಲು ಮಾರಾಟ ಮಾಡಿ ದಿನದ ಕೂಳು ಹುಟ್ಟಿಸಿಕೊಳ್ಳಬಹುದು. ನಿಮ್ಮ ಬಳಿ ಡೈರಿ ಇದ್ದಲ್ಲಿ ಲಕ್ಷಾಂತರ ರೂ.ಗಳನ್ನು ಸಂಪಾದನೆ ಮಾಡಬಹುದು. ಆದರೆ ನೀವು ಇಂಥ ಕೆಲಸ ಮಾಡಲು ಯೌವ್ವನದಲ್ಲಿ ಅಥವಾ 40 ವರ್ಷದ ಒಳಗಿನವರಾಗಿರಬೇಕು ಎಂಬ ಅಭಿಪ್ರಾಯ ಸಾಮಾನ್ಯ.
ಬನಸ್ಕಾಂತಾ ಜಿಲ್ಲೆಯ ನಗಾನಾ ಗ್ರಾಮದ ನವಾಲ್‌ಬೆನ್ ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಜಿಲ್ಲೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. 2020ರಲ್ಲಿ ಒಂದು ಕೋಟಿ ರೂ. ಮೌಲ್ಯದ ಹಾಲನ್ನು ಮಾರಾಟ ಮಾಡಿದ ಇವರು ಮಾಸಿಕ ಮೂರೂವರೆ ಲಕ್ಷ ರೂ.ಗಳನ್ನು ಸಂಪಾದಿಸಿದ್ದಾರೆ. 2019ರಲ್ಲಿ ಇವರು 87.95 ಲಕ್ಷ ರೂ. ಮೌಲ್ಯದ ಹಾಲನ್ನು ಮಾರಾಟ ಮಾಡಿದ್ದರು ಎಂದು ತಿಳಿದು ಬಂದಿದೆ.
80 ಎಮ್ಮೆಗಳು ಹಾಗೂ 45 ಹಸುಗಳನ್ನು ಹೊಂದಿರುವ ನವಾಲ್‌ಬೆನ್ ತಮ್ಮೂರಿನ ಸುತ್ತಲಿನ ಗ್ರಾಮಗಳಲ್ಲಿ ಹಾಲು ಮಾರಾಟ ಮಾಡುತ್ತಾರೆ. ಇವರಿಗೆ ನಾಲ್ಕು ಗಂಡು ಮಕ್ಕಳಿದ್ದು, ಅವರೆಲ್ಲಾ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರೂ ಸಹ ತಮ್ಮ ಅಮ್ಮನಷ್ಟು ಸಂಪಾದನೆ ಮಾಡಲು ಆಗುತ್ತಿಲ್ಲ.
ಪ್ರತಿನಿತ್ಯ ಬೆಳಿಗ್ಗೆ ಖುದ್ದು ತಾವೇ ಹಾಲು ಕರೆಯುವ ನವಾಲ್‌ಬೆನ್ ತಮ್ಮ ಈ ಉದ್ಯಮದಲ್ಲಿ ನೆರವಾಗಲು 15 ಮಂದಿ ಕಾರ್ಮಿಕರನ್ನು ಇಟ್ಟುಕೊಂಡಿದ್ದಾರೆ. ತಮ್ಮ ಈ ಸಾಧನೆಗೆ ಬನಸ್ಕಾಂತಾ ಜಿಲ್ಲಾ ಮಟ್ಟದ ಪ್ರತಿಷ್ಠಿತ ಗೌರವಗಳಾದ ಲಕ್ಷ್ಮೀ ಪ್ರಶಸ್ತಿ ಹಾಗೂ ಪಶುಪಾಲಕ ಪ್ರಶಸ್ತಿಗಳನ್ನು ಕ್ರಮವಾಗಿ ಎರಡು ಹಾಗೂ ಮೂರು ಬಾರಿ ಗೆದ್ದಿದ್ದಾರೆ.