ಹೊಸ ವರ್ಷದ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ವರ್ಷದ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸಲು ಈಗಾಗಲೇ ಅನೇಕ ಕಂಪನಿಗಳು ಜನರಿಗೆ ಒಂದಿಲ್ಲೊಂದು ಆಫರ್ಗಳನ್ನ ನೀಡುತ್ತಲೇ ಇದೆ. ಇದೀಗ ಈ ಸಾಲಿಗೆ ವಾಟ್ಸಾಪ್ ಕೂಡ ಸೇರಿದ್ದು ಮುಂದಿನ ವರ್ಷದ ಆರಂಭದಲ್ಲಿ ಗ್ರಾಹಕರಿಗೆ ಮತ್ತಷ್ಟು ಸೌಲಭ್ಯಗಳನ್ನ ನೀಡೋಕೆ ಪ್ಲಾನ್ ಮಾಡಿದೆ.
ಮುಂದಿನ ವರ್ಷದಲ್ಲಿ ವಾಟ್ಸಾಪ್ ಮೆಸೆಂಜರ್ನ ಹೊಸ ನಿಯಮ ಹಾಗೂ ಗೌಪ್ಯತೆ ನೀತಿಯನ್ನ ಬಳಕೆದಾರರು ಒಪ್ಪಿಕೊಳ್ಳಬೇಕಾಗುತ್ತೆ. ಫೇಸ್ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ ಫೆಬ್ರವರಿ 8ರಿಂದ ತಮ್ಮ ಸೇವಾ ನಿಯಮಗಳಲ್ಲಿ ಕೆಲ ಮಹತ್ವಪೂರ್ಣ ಬದಲಾವಣೆಗಳನ್ನ ಮಾಡಲಿದೆ. ವಾಟ್ಸಾಪ್ನ ಹೊಸ ಗೌಪ್ಯತಾ ನೀತಿ ಬಳಕೆದಾರರಿಗೆ ಇಷ್ಟವಾಗದೇ ಇದ್ದಲ್ಲಿ ಬಳಕೆದಾರರು ಸುಲಭವಾಗಿ ತಮ್ಮ ಖಾತೆಯನ್ನ ಡಿಲೀಟ್ ಮಾಡಬಹುದಾಗಿದೆ.
ಇನ್ನು ಡೆಸ್ಕ್ಟಾಪ್ನಲ್ಲಿ ವಾಟ್ಸಾಪ್ ಬಳಕೆ ಮಾಡುವವರಿಗೆ ಆಡಿಯೋ ಹಾಗೂ ವಿಡಿಯೋ ಕಾಲ್ ಮಾಡುವ ಸೌಲಭ್ಯ ನೀಡಲು ವಾಟ್ಸಾಪ್ ಸಿದ್ಧತೆ ನಡೆಸುತ್ತಿದೆ. ವಾಟ್ಸಾಪ್ ವೆಬ್ ಬಳಕೆ ಮಾಡುವವರು ಸಿಸ್ಟಮ್ ಹಾಗೂ ಲ್ಯಾಪ್ಟಾಪ್ಗಳಲ್ಲಿ ಚಾಟ್ ಮಾಡಬಹುದಾಗಿತ್ತು. ಆದರೆ ಆಡಿಯೋ ಹಾಗೂ ವಿಡಿಯೋ ಕರೆಗೆ ಅವಕಾಶ ಇರುತ್ತಿರಲಿಲ್ಲ. ಆದರೆ ಮುಂದಿನ ವರ್ಷದಿಂದ ವಾಟ್ಸಾಪ್ ಈ ಸೌಲಭ್ಯವನ್ನ ಬಳಕೆದಾರರಿಗೆ ನೀಡಲಿದೆ.