ದೇಶದಲ್ಲಿ 5 ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆಗಳನ್ನು ನೀಡಲಾಗಿದ್ದು, ಹೀಗಾಗಿ ಜೂನ್ 8ರ ಸೋಮವಾರದಿಂದ ರಾಜ್ಯದಾದ್ಯಂತ ಹೋಟೆಲ್ ಗಳು ಆರಂಭವಾಗಿವೆ. ಹೋಟೆಲ್ ಆರಂಭಕ್ಕೆ ಬಹಳಷ್ಟು ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಇದನ್ನು ಪಾಲಿಸಿದರೂ ಕೂಡ ಗ್ರಾಹಕರು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ.
ಹೋಟೆಲ್ ಪ್ರವೇಶಿಸುವ ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಿದೆ. ಅಲ್ಲದೆ ಗ್ರಾಹಕರಿಗೆ ಸ್ಯಾನಿಟೈಸರ್ ನೀಡಬೇಕಾಗಿದ್ದು, ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ.
ಬಹಳಷ್ಟು ಹೋಟೆಲ್ ಗಳಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದ್ದರೂ ಸಹ ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಕಂಡುಬಂದಿಲ್ಲ. ಅಲ್ಲದೆ ಬಂದವರೂ ಸಹ ತಮಗೆ ಎಲ್ಲಿ ಕೊರೊನಾ ಸೋಂಕು ತಗುಲುವುದು ಎಂಬ ಆತಂಕದಲ್ಲೇ ಊಟ – ಉಪಹಾರ ಸೇವಿಸಿದ್ದಾರೆ. ಕೆಲ ಹೋಟೆಲ್ ಗಳಲ್ಲಿ ಬಳಸಿ ಬಿಸಾಡುವ ಪ್ಲೇಟ್, ಲೋಟಗಳನ್ನು ಉಪಯೋಗಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗುವ ವಿಶ್ವಾಸವನ್ನು ಹೋಟೆಲ್ ಮಾಲೀಕರುಗಳು ಹೊಂದಿದ್ದಾರೆ.