ಬೆಂಗಳೂರು: ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಹೊಳೆನರಸಿಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಆ ಹುಡುಗ ಎರಡು ವರ್ಷದಿಂದ ಜೈಲಲ್ಲಿದ್ದಾನೆ. ಎರಡು ವರ್ಷದಿಂದ ಜೈಲಿನಲ್ಲಿ ಸಿಗದ ಮೊಬೈಲ್ ಈಗ ಹೇಗೆ ಸಿಕ್ಕಿದೆ? ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ಸಿಕ್ಕಿದೆ ಅಂತಾರೆ. ಅದನ್ನು ತಂದು ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಎರಡು ವರ್ಷ ಜೈಲಿನಲ್ಲಿ ಸಿಗದ ಫೋನ್ ಈಗ ಬಿಡದಿ, ಕೆಪಿಎಸ್‌ಸಿ ಹಗರಣ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್ ಸಿಕ್ಕಿದೆ. ಈಗ ಹೊಸ ಕತೆ ಕಟ್ಟುತ್ತಿದ್ದಾರೆ ಎಂದು ಸಿಎಂ ಡಿ.ಕೆ ಶಿವಕುಮಾರ್ =ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನನ್ನ ಮನೆ ಅಲುಗಾಡಿಸಿರುವುದು ಯಾರು ಎಂದು ನಿಮಗೆ ಗೊತ್ತಿದೆ. ಒಂದು ಸಾಕ್ಷಿ ರೆಡಿ ಮಾಡಲು ಸಾಕಾಗಿದೆ ಎಂದು ಯಾರು ಹೇಳಿದ್ದು? ದೇವೇಗೌಡರ ಕುಟುಂಬ ಮುಗಿಸುತ್ತೇವೆ ಎಂದು ಯಾರು ಹೇಳಿದ್ದು? ಈ ಮುಖ್ಯಮಂತ್ರಿನೇ ತಾನೇ ಎಂದು ಕಿಡಿಕಾರಿದ್ದಾರೆ.
ಪ್ರತಿನಿತ್ಯ ಸೀರಿಸ್ ಬಿಡಿಸುತ್ತಿದ್ದಾರೆ, ಯಾಕೆ ಬಿಡುತ್ತಿದ್ದಾರೆ? ಹಿಂದೆ ಏಕೆ ಮಾಡಲಿಲ್ಲ, ಎರಡು ವರ್ಷದಿಂದ ಫೋನ್ ಇಲ್ವಾ ಅವನ ಹತ್ತಿರ? ಈಗ ಬಂತಾ, ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು? ಆ ಅಶ್ಲೀಲ ಚಿತ್ರ ಎಲ್ಲಿಂದ ಜೈಲೊಳಗೆ ಬಂತು, ಯಾಕೆ ಬಂತು, ಯಾರು ಕೊಟ್ಟವರು? ಸಪ್ಲೈ ಮಾಡುವವರು ಯಾರು, ನಾವು ಮಾಡಿಸಿದ್ವಾ ಎಂದು ಪ್ರಶ್ನಿಸಿದ್ದಾರೆ.
ಬಿಡದಿಗೆ ವಿರೋಧ, ನೈಸ್ ಬಗ್ಗೆ ಕೋರ್ಟ್ ಆದೇಶ ಬಂತು, ಅದಕ್ಕೆ ಆ ಹುಡುಗನ ಹೆಸರು ಹೇಳಿ ದೇವೇಗೌಡರ ಕುಟುಂಬದ ಧ್ವನಿ ಮುಚ್ಚಿಸುತ್ತೀರಾ? ನಿಮ್ಮ ಕೈಯಲ್ಲಿ ಬಾಯಿ ಮುಚ್ಚಿಸಲು ಆಗುತ್ತಾ? ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ ಎಂದು ತಿರುಗೇಟು ನೀಡಿದರು.
ನಾವೇ ನಮ್ಮ ಎಂಪಿ ಮಾಡಿದ್ದೇವಲ್ಲ, ಮಂಡ್ಯದಲ್ಲಿ ಅವನು ಈ ಸರ್ಕಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ದೇವೇಗೌಡರ ಕುಟುಂಬವನ್ನು ಸರ್ವ ನಾಶ ಮಾಡೋದೆ ಮೊದಲ ಆದ್ಯತೆ ಎಂದು ಹೇಳಿದ್ದಾನೆ. ಡಿ.ಕೆ.ಶಿವಕುಮಾರ್, ಏನೇನು ತರ್ಸಿದ್ರಿ, ಎಲ್ಲಿಂದ ತರಿಸಿದ್ರಿ? 400 ರೇಪ್ ಇದೆಲ್ಲಾ ಕತೆ ತಂದ್ರಿ, ಯಾರಿಗೆ ನ್ಯಾಯ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕುಟುಂಬದಿಂದ ಅನ್ಯಾಯ ಮಾಡಿದ್ದೇವೆ ಅಲ್ವಾ? ಎಷ್ಟು ಹೆಣ್ಣುಮಕ್ಕಳ ಕುಟುಂಬಗಳನ್ನು ಸರಿ ಮಾಡಿ ಕೊಟ್ಟಿದ್ದೀರಾ? ಆ ಹುಡುಗ ಮಾಡಿದ್ದಾನಲ್ವಾ, ಎಷ್ಟು ಹೆಣ್ಣುಮಕ್ಕಳ ಮಾನ ಕಾಪಾಡಿದ್ದೀರಿ? ಇದಕ್ಕೆಲ್ಲ ಹೆದರಿಕೊಂಡು ಹೋಗಲ್ಲ. ನ್ಯಾಯ, ಸತ್ಯಕ್ಕೆ ತಲೆ ಬಾಗುತ್ತೇನೆ. ತಪ್ಪು ಮಾಡಿದ್ರೆ ತಲೆ ಬಾಗಲು ಸಿದ್ದರಿದ್ದೇವೆ. ನಿಮ್ಮ ತರ ಎಲ್ಲಾ ಬಿಟ್ಟು ದೋಚುವ ಕೆಲಸ ಮಾಡಲ್ಲ. ಎಷ್ಟು ಕುಟುಂಬ ಹಾಳು ಮಾಡಿದ್ದೀರಿ, ಬೇಕಾದಷ್ಟು ಹೇಳಬಲ್ಲೆ ಎಂದುಕಿಡಿಕಾರಿದರು.
ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಜನರ ಧ್ವನಿ ನಿಲ್ಲಿಸಿದ್ದೀರಿ? 48 ಜನರ ಹನಿಟ್ರ‍್ಯಾಪ್ ಬಗ್ಗೆ ಆ ಸರ್ಕಾರದ ಮಂತ್ರಿ ಹೇಳ್ತಾರೆ. ರಾಜಕಾರಣಿಗಳು, ನ್ಯಾಯಾಧೀಶರು, ಕೇಂದ್ರ ಮಂತ್ರಿಗಳು, ಕೇಂದ್ರ ನಾಯಕರುಗಳು ಇವರದ್ದೆಲ್ಲಾ ಮಾಡಿ ಇಟ್ಟು ಕೊಂಡಿದ್ದಾರೆ. ನಮ್ಮ ಸ್ತಬ್ದ ಮಾಡಲು ಆಗಲ್ಲ, ಇದನ್ನು ಹೇಳಿಕೊಂಡು ನಾನು ಹೋರಾಟ ಮಾಡಲೇಬೇಕು. ನನ್ನ ತಾಯಿ ಬಗ್ಗೆ ಯಾವ್ಯಾವ ಪದಗಳನ್ನು ಉಪಯೋಗ ಮಾಡಿದ್ರು ಅಂತ ಗೊತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಅಮೆರಿಕಾದಿಂದ ಬಂದ ಬಳಿಕ ಅಲ್ಲೋಲ ಕಲ್ಲೋಲವಾಗುವ ಸುದ್ದಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ವಿಚಾರವಾಗಿಯೂ ಮಾತನಾಡಿದ ಕುಮಾರಸ್ವಾಮಿ, ಎಲ್ಲಾ ಸಿದ್ಧತೆ ಮಾಡಿಕೊಂಡು ಜನರ ಮುಂದೆ ಬರುತ್ತೇನೆ. ನಾನು ಸುಮ್ಮನೇ ಹೇಳಿಕೆ ಕೊಟ್ಟಿಲ್ಲ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಇಂದು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇನೆ. ನಾನು ಅಕ್ರಮದ ದಾಖಲೆ ಬಿಡುಗಡೆ ಮಾಡುತ್ತೇನೆ. ಸತ್ಯಾಸತ್ಯತೆ ಪರಾಮರ್ಶೆ ಮಾಡುವುದು ನಾಲ್ಕು ಅಂಗಗಳಿಗೆ ಬಿಟ್ಟಿದ್ದು ಎಂದು ಹೇಳಿದರು.

