ಬೆಂಗಳೂರು: ಮಕ್ಕಳ ಕೈಯಲ್ಲಿ ದುಡಿಮೆಯ ಭಾರವಲ್ಲ, ಪುಸ್ತಕ-ಪೆನ್ನು ಇರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಬಾಲಕಾರ್ಮಿಕ ಪದ್ಧತಿ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ.
ಸೆಪ್ಟೆಂಬರ್ 12ರವರೆಗೆ ರಾಜ್ಯದಾದ್ಯಂತ 16,951 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ 800 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಮಕ್ಕಳ ಬಾಲ್ಯವು ಕೆಲಸದ ಸ್ಥಳಗಳಲ್ಲಿ ಕಳೆಯದೆ, ಶಾಲೆಗಳಲ್ಲಿ ಕಳೆಯಬೇಕು. ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಹಾಗೂ ಗೌರವಯುತ ಬದುಕು ದೊರೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ಮೂಲಕ ಮಕ್ಕಳನ್ನು ಶಿಕ್ಷಣದತ್ತ ಕರೆದೊಯ್ಯಲು ಹಾಗೂ ಅವರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆಯನ್ನು ಮುಂದುವರಿಸಲಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವಿಶೇಷ ಆಂತರಿಕ ಮೀಸಲಾತಿ
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿಪರ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಈಗಿರುವ ಶೇ.15ರ ಗ್ರಾಮೀಣ ಮೀಸಲಾತಿಯಲ್ಲಿಯೇ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವಿಶೇಷ ಆಂತರಿಕ ಮೀಸಲಾತಿ ಕಲ್ಪಿಸಲಾಗಿದೆ.
ಈ ನಿರ್ಧಾರದಿಂದ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ. ವೃತ್ತಿಪರ ಶಿಕ್ಷಣದ ಕನಸು ಕಾಣುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇದು ಹೊಸ ಶಕ್ತಿ ನೀಡಲಿದೆ.
ಕನಸುಗಳಿಗೆ ಬಡತನ ಅಡ್ಡಿಯಾಗಬಾರದು, ಗ್ರಾಮೀಣ ಪ್ರತಿಭೆಗಳ ಭವಿಷ್ಯ ಉಜ್ವಲವಾಗಬೇಕು ಎಂಬ ಆಶಯದೊಂದಿಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
ತನಿಖಾಧಿಕಾರಿಗಳು ಹಾಗೂ ಸರ್ಕಾರಿ ವಕೀಲರ ನಡುವೆ ಸಮನ್ವಯ ಸಾಧಿಸುವಂತೆ ಸೂಚನೆ
ಸರ್ಕಾರದ ಪರವಾಗಿ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗೆ ಮತ್ತಷ್ಟು ಬಲ. ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರಕರಣದ ಆರಂಭಿಕ ಹಂತದಿಂದಲೇ ಸಂಬಂಧಿಸಿದ ಇಲಾಖೆಗಳು, ತನಿಖಾಧಿಕಾರಿಗಳು ಹಾಗೂ ಸರ್ಕಾರಿ ವಕೀಲರ ನಡುವೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಾಹಿತಿ ಅಥವಾ ದಾಖಲೆಗಳ ಕೊರತೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಯಾವುದೇ ಸರ್ಕಾರಿ ಪ್ರಕರಣ ದುರ್ಬಲವಾಗಬಾರದು. ಸರ್ಕಾರಿ ವಕೀಲರಿಗೆ ಅಗತ್ಯ ದಾಖಲೆಗಳು, ವಾಸ್ತವಾಂಶಗಳು ಹಾಗೂ ಇಲಾಖೆಯ ನಿಲುವು ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜೂನ್ 2026ರ ಪರಿಶೀಲನಾ ಅವಧಿಯಲ್ಲಿ ಒಟ್ಟು 14,320 ಪ್ರಕರಣಗಳು ವಿಲೇವಾರಿಯಾಗಿವೆ. ಈ ಅವಧಿಯಲ್ಲಿ NDPS ಪ್ರಕರಣಗಳಲ್ಲಿ 40.74% ಹಾಗೂ ವಿದ್ಯುತ್ ಕಾಯ್ದೆಯ ಪ್ರಕರಣಗಳಲ್ಲಿ 50% ಶಿಕ್ಷೆ ಪ್ರಮಾಣ ದಾಖಲಾಗಿದೆ. ವಿಶೇಷ ಕಾಯ್ದೆಗಳಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಕರಣಗಳಲ್ಲಿ 9.43% ಹಾಗೂ POCSO ಪ್ರಕರಣಗಳಲ್ಲಿ 14.28% ಶಿಕ್ಷೆ ಪ್ರಮಾಣ ದಾಖಲಾಗಿದೆ. ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪ್ರಕರಣಗಳ ಪರಿಣಾಮಕಾರಿ ಹಾಗೂ ತ್ವರಿತ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಪ್ರಕರಣಗಳ ಮಾಹಿತಿ, ದಾಖಲೆಗಳು, ಪ್ರಗತಿ ಹಾಗೂ ನ್ಯಾಯಾಲಯದ ಆದೇಶಗಳ ನಿರ್ವಹಣೆಯಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಮುಖ ಪ್ರಕರಣಗಳ ನಿರ್ವಹಣೆಗೆ 416 ಪ್ರಕರಣಗಳಿಗೆ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ ಮಾಡಿರುವ ಬಗ್ಗೆಯೂ ಪರಿಶೀಲಿಸಲಾಯಿತು.
ಸಮನ್ವಯ, ತಂತ್ರಜ್ಞಾನ, ಪರಿಣಾಮಕಾರಿ ಮೇಲ್ವಿಚಾರಣೆ ಸರ್ಕಾರದ ಹಿತಾಸಕ್ತಿಯನ್ನು ನ್ಯಾಯಾಲಯಗಳಲ್ಲಿ ಸಮರ್ಥವಾಗಿ ಪ್ರತಿನಿಧಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

