HomeAgricultureಕಾರ್ಖಾನೆಗಳ ಸಮಸ್ಯೆ: ಹಿರೇಬಗನಾಳ್ ರೈತರಿಗೆ ಶೀಘ್ರವೇ ಸಿಹಿಸುದ್ದಿ

ಕಾರ್ಖಾನೆಗಳ ಸಮಸ್ಯೆ: ಹಿರೇಬಗನಾಳ್ ರೈತರಿಗೆ ಶೀಘ್ರವೇ ಸಿಹಿಸುದ್ದಿ

ಕೊಪ್ಪಳದ ಹಿರೇಬಗನಾಳ್ ಗ್ರಾಮದಲ್ಲಿ ಸ್ಪಾಂಜ್‌ ಮತ್ತು ಐರನ್‌ ಕಾರ್ಖಾನೆಗಳಿಂದ ವ್ಯಾಪಕ ಮಾಲಿನ್ಯವಾಗುತ್ತಿದೆ. ರೈತರು ಕಾರ್ಖಾನೆಗಳನ್ನು ಸ್ಥಳಾಂತರ ಮಾಡಿ ಅಥವ ವಿಷ ಕೊಡಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಕೊಪ್ಪಳ ಜಿಲ್ಲೆಯ ಹಿರೇಬಗನಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಸ್ಟೀಲ್ ಟೆಕ್ ಪ್ರೈ. ಲಿಮಿಟೆಡ್ ಸಂಸ್ಥೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹಿರೇಬಗನಾಳ್ ಗ್ರಾಮದಲ್ಲಿನ ವಾಯು ಮಾಲಿನ್ಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಗ್ರಾಮದ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಅವರ ರೈತರನ್ನು ಉದ್ದೇಶಿಸಿ ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಕಾನೂನು ಅಡಿಯಲ್ಲಿ ಸ್ಥಾಪಿತವಾದ ಉದ್ಯಮವನ್ನು ಶಾಶ್ವತವಾಗಿ ನಿಲ್ಲಿಸಲು ಕಾನೂನಿನಲ್ಲಿ ಅಡ್ಡಿ ಬರುತ್ತದೆ. ಆದರೆ, ಮಾಲಿನ್ಯ ಕಾರ್ಯವನ್ನು ಮುಂದುವರೆಸುವ ಕಾರ್ಖಾನೆಗಳನ್ನು ಶಾಶ್ವತವಾಗಿ ನಿಲ್ಲಿಸಲು ಅವಕಾಶವಿದೆ” ಎಂದು ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.

“ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರದ ನಿಯಮದಡಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ನೆಲ, ಜಲ, ವಾಯು ಮಾಲಿನ್ಯವನ್ನು ನಿತ್ರಣ ಮಾಡುವುದಕ್ಕಾಗಿ ನಮ್ಮ ಮಂಡಳಿ ಸ್ಥಾಪನೆಯಾಗಿದೆ. ಬಾದಿತ ಜನರ ಸಮಸ್ಯೆಯನ್ನು ಬಗೆಹರಿಸಲು ಹಿರೇಬಗನಾಳ್‌ಗೆ ಭೇಟಿ ನೀಡಿರುವೆ. ಈ ಗ್ರಾಮಕ್ಕೆ ಬರುವುದಕ್ಕೆ ಮುಂಚೆ ಇಲ್ಲಿನ ಸಮಸ್ಯೆಗಳ ಕುರಿತು ಮಾಧ್ಯಮಗಳ ವರದಿ, ಗ್ರಾಮಸ್ಥರ ದೂರುಗಳನ್ನು ಗಮನಿಸಿದ್ದೇನೆ” ಎಂದರು.

“ಈಗಾಗಲೇ ಹಲವಾರು ಸೂಚನೆಗಳನ್ನು ಕಾರ್ಖಾನೆಗಳಿಗೆ ನೀಡಲಾಗಿದ್ದು, ಪರಿಣಾಮಕಾರಿಯಾದ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅವರ ಜವಾಬ್ದಾರಿಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಅಧಿಕಾರಿಗಳ ತಂಡವು ಅನಿರೀಕ್ಷಿತವಾಗಿ ಭೇಟಿ ನೀಡಿ, ಪರಿಶೀಲನೆ ಕೈಗೊಂಡು ವರದಿ ಸಿದ್ಧಪಡಿಸಲು ಇಲ್ಲಿಗೆ ಕಳುಹಿಸಲಾಗಿತ್ತು. ಈ ತಂಡವು ನನಗೆ ವರದಿ ತಲುಪಿಸಲು ಸಿದ್ಧತೆಯನ್ನು ಕೈಗೊಂಡಿದೆ. ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

“ಈಗಾಗಲೇ ಸಂಬಂಧಿಸಿದ ಕಾರ್ಖಾನೆಗಳಿಗೆ ನೋಟೀಸ್ ನೀಡಲಾಗಿದೆ. ಇದು ಕೊನೆಯ ಅವಕಾಶವಿದ್ದು, ಸಮಸ್ಯೆಗಳನ್ನು ಸರಿಪಡಿಸಲು ಯಾವ ತಾಂತ್ರಿಕ ವಿಚಾರಗಳಿವೆ, ಅವುಗಳ ಬಗ್ಗೆ ಸಂಬಂಧಿಸಿದ ಕಾರ್ಖಾನೆಗಳು ತಾಂತ್ರಿಕ ವರದಿಯೊಂದಿಗೆ ಮುಚ್ಚಳಿಕೆ ಪತ್ರವನ್ನು ನೀಡಬೇಕು. ತಪ್ಪಿದ್ದಲ್ಲಿ ನಿಯಮಗಳಡಿ ಕಾನೂನು ಕ್ರಮ ಕೈಗೊಳ್ಳಲು ಶತಸಿದ್ದ. ಜನರ ಜೀವನದ ಜೊತೆ ಚೆಲ್ಲಾಟವಾಡಲು ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಯಾರಿಗೂ ಅವಕಾಶವನ್ನು ನೀಡುವುದಿಲ್ಲ” ಎಂದು ಹೇಳಿದರು.

ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, “ಹಿರೇಬಗನಾಳ್ ಮತ್ತು ಕಾಸರಕಂಡಿ ಕುಣಿಕೇರಿ ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳು ಕುಣಿಕೇರಿ ತಾಂಡ ಹಾಗೂ ಹಾಲವರ್ತಿ ಸೇರಿದಂತೆ ಮತ್ತಿತರೆ ಗ್ರಾಮಗಳಲ್ಲಿ ವಿವಿಧ ಕಂಪನಿಗಳಿಂದ ಆಗುವಂತಹ ಧೂಳಿನಿಂದ ಆಯಾ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಅರ್ಜಿಯನ್ನು ಕೊಟ್ಟಿದ್ದಾರೆ ಮತ್ತು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ” ಎಂದು ತಿಳಿಸಿದರು.

“ಬಾದಿತ ಗ್ರಾಮಗಳನ್ನು ಸ್ಥಳಾಂತರ ಮಾಡಲು ಅಥವಾ ಕಂಪನಿಗಳನ್ನು ಸ್ಥಳಾಂತರ ಮಾಡಲು ಈ ಹಿಂದೆ ಮನವಿ ಮಾಡಲಾಗಿತ್ತು. ನಮ್ಮ ಭಾಗದಲ್ಲಿ 1996ರಿಂದ ಕಂಪನಿಗಳು ಬರತ್ತಾ ಇದ್ದು, 2008 ರಿಂದಲೇ ಇವುಗಳ ವಿರೋಧ ಆಗುತ್ತಿದೆ. ಇವತ್ತು ನಮ್ಮ ಭಾಗದಲ್ಲಿ ಸುಮಾರು 35ಕ್ಕೂ ಹೆಚ್ಚು ಕಾರ್ಖಾನೆಗಳು ಇದ್ದು, ಅದರಲ್ಲಿ ಕೆಲವು ದೂಳು ಮುಕ್ತ ಕಾರ್ಖಾನೆಗಳಿವೆ. ಇನ್ನುಳಿದ ಕಾರ್ಖಾನೆಗಳು ದೂಳನ್ನು ಹೋಗಲಾಡಿಸಲು ಯಾವುದೇ ಕ್ರಮ ವಹಿಸುತ್ತಿಲ್ಲ. ಹಾಗಾಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಮತ್ತು ಕೃಷಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ” ಎಂದರು.

ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿ, “ಜಿಲ್ಲೆಯ ಹಿರೇಬಗನಾಳ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆಲ, ಜಲ ಮತ್ತು ವಾಯು ಮಾಲಿನ್ಯದ ಪರಿಣಾಮಗಳ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, ಜನರ ಆರೋಗ್ಯ ಮತ್ತು ಕೃಷಿ ಉತ್ಪಾದನೆ ಮೇಲೆ ಪರಿಣಾಮಗಳು ಕಂಡು ಬಂದಿರುತ್ತದೆ. ಗ್ರಾಮಸ್ಥರು ಹಾಗೂ ಹೋರಾಟಗಾರರು ನೀಡಿದ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದೆ” ಎಂದು ಹೇಳಿದರು.

“ಹಿರೇಬಗನಾಳ್ ಗ್ರಾಮದಲ್ಲಿ ಆರೋಗ್ಯ ಸರ್ವೆ ಹಾಗೂ ಸ್ಕ್ರೀನಿಂಗ್ ಕಾರ್ಯ ನಡೆಸಲಾಗಿದ್ದು, ಉಳಿದ ಗ್ರಾಮಗಳಲ್ಲಿ ಸಹ ಆರೋಗ್ಯ ಸಮೀಕ್ಷೆ ಪ್ರಾರಂಭಿಸಲಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಸರ್ಕಾರದ ಮೂಲಕ ಇಂಡಿಯನ್ ಮೆಡಿಕಲ್ ಕೌನ್ಸಿಲ್‌ಗೆ ಮನವಿ ಕಳುಹಿಸಲಾಗಿದೆ. ಹಿರೇಬಗನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಸಮೀಕ್ಷೆಯಲ್ಲಿ ಸುಮಾರು 122 ಜನರಿಗೆ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, 49 ಜನರಿಗೆ ಚರ್ಮ ರೋಗ, 18 ಜನರಿಗೆ ಕ್ಯಾಟ್ರಾಕ್ಟಿವ್, 48 ಜನರಿಗೆ ಕಣ್ಣಿನ ಸಮಸ್ಯೆಗಳು, 78 ಜನರಿಗೆ ಮೊಣಕಾಲು ನೋವು, 29 ಜನರಿಗೆ ಟಿಬಿ, 3 ಜನರಿಗೆ ಸ್ಟ್ರೋಕ್, 1 ಕ್ಯಾನ್ಸರ್ ಹಾಗೂ ಪ್ರೈಮರಿ ಇನ್ಫೆರ್ಟಿಲಿಟಿ ಪ್ರಕರಣ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ” ಎಂದರು.

“ಕೃಷಿ ಕ್ಷೇತ್ರದಲ್ಲಿಯೂ ಪರಿಣಾಮ ಕಂಡು ಬಂದಿದ್ದು, ಬೆಳೆ ಕಾಟಾವು ಪ್ರಯೋಗದಲ್ಲಿ ಸುಮಾರು 40 ರಿಂದ 50 ಶೇಕಡಾ ಇಳುವರಿ ಕಡಿಮೆಯಾಗಿರುವುದು ತಿಳಿದು ಬಂದಿದೆ. ಪಪ್ಪಾಯ ಬೆಳೆಗಳಲ್ಲಿ ಮೇಲೆ ಕಪ್ಪು ಚುಕ್ಕೆಗಳು, ಈರುಳ್ಳಿಗಳ ಮೇಲೆ ಬೂದು ಬರುವಂತಹ ಲಕ್ಷಣಗಳು ಕಂಡುಬಂದಿದ್ದು, ಇದರಿಂದ ಇಳುವರಿ ಕುಸಿತವಾಗಿದೆ. ಈ ಸಂಬಂಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ನಡೆಸಿ, ತಾತ್ಕಾಲಿಕ ಮತ್ತು ದೀರ್ಘಕಾಲಿಕ ಕ್ರಮಗಳ ಬಗ್ಗೆ ಸೂಚನೆ ನೀಡಿದೆ” ಎಂದು ಹೇಳಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular