HomeKarnatakaನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ಟೋಲ್ ಸಂಗ್ರಹ ಮಾಡಿದರೂ ಸೌಕರ್ಯ ಮಾತ್ರ ಕೊಡುತ್ತಿಲ್ಲ: ಶಾಸಕ...

ನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ಟೋಲ್ ಸಂಗ್ರಹ ಮಾಡಿದರೂ ಸೌಕರ್ಯ ಮಾತ್ರ ಕೊಡುತ್ತಿಲ್ಲ: ಶಾಸಕ ಸೋಮಶೇಖರ್ ಕಿಡಿ

ಬೆಂಗಳೂರು: ವಿಧಾನಸಭೆಯಲ್ಲಿ ನೈಸ್ ರಸ್ತೆಯ ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಗಮನ ಸೆಳೆದರು.

ಹೊಸೂರು ರಸ್ತೆಯಿಂದ ಮಾಗಡಿ ರಸ್ತೆ ವರೆಗೆ ನೈಸ್ ರಸ್ತೆಯನ್ನು ಸರ್ಕಾರ ತಕ್ಷಣವೇ ವಶಕ್ಕೆ ಪಡೆಯಬೇಕು ಎಂದು ಶಾಸಕರು ಆಗ್ರಹಿಸಿದದರೆ. ಈ ಹಿಂದೆ ಇದೇ ವಿಷಯದ ಕುರಿತು ಪ್ರಶ್ನೆ ಎತ್ತಿದಾಗ ತನಿಖೆಗೆ ಆದೇಶ ನೀಡಲಾಗಿದ್ದರೂ, ನೈಸ್ ರಸ್ತೆಯ ಸೇತುವೆಗಳ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.

ಸುಮಾರು 30–35 ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡಿದ ಭೂಮಾಲೀಕರಿಗೆ ಇನ್ನೂ ಪರಿಹಾರ, ನಿವೇಶನಗಳನ್ನು ನೀಡಲಾಗಿಲ್ಲ. ನೈಸ್ ಕಂಪನಿಯ ನಿರ್ವಹಣೆ ಹಾಗೂ ವರ್ತನೆ ಸರಿಯಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೈಸ್ ರಸ್ತೆಯಲ್ಲಿ ಪ್ರತಿದಿನ ಸುಮಾರು 10 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ. ಇಷ್ಟು ದೊಡ್ಡ ಆದಾಯವಿದ್ದರೂ ರಸ್ತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಿಶೇಷವಾಗಿ 25–30 ವರ್ಷಗಳ ಹಿಂದೆ ನಿರ್ಮಿಸಲಾದ ಕೆಲವು ಸೇತುವೆಗಳು ದುಸ್ಥಿತಿಯಲ್ಲಿದ್ದು, ಸ್ಕೂಟರ್ ಸಂಚಾರಕ್ಕೂ ಯೋಗ್ಯವಾಗಿಲ್ಲ. ನನ್ನ ಕ್ಷೇತ್ರದಲ್ಲಿ ಮಾತ್ರವೇ ಎಂಟು ಸೇತುವೆಗಳು ಅಪಾಯಕರ ಸ್ಥಿತಿಯಲ್ಲಿ ಇದೆ ಎಂದು ಸೋಮಶೇಖರ್ ಹೇಳಿದರು.

ಈ ಬಗ್ಗೆ ನೈಸ್ ಕಂಪನಿ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಾಜಿ ಪಿಡಬ್ಲ್ಯೂಡಿ ಸಚಿವ ಹೆಚ್​​ಸಿ ಅವರ ಅವಧಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಸದಸ್ಯರಾಗಿದ್ದ ಡಿ.ಕೆ ಜಯಚಂದ್ರ ಸೇರಿದಂತೆ ಹಲವು ಸದಸ್ಯರು ಸ್ಥಳ ಪರಿಶೀಲನೆ ನಡೆಸಿ ಅನೇಕ ಸಮಸ್ಯೆಗಳನ್ನು ಪತ್ತೆಹಚ್ಚಿದ್ದರು. ಆದರೂ ನೈಸ್ ಕಂಪನಿ ಸರ್ಕಾರ ಅಥವಾ ಸದನದ ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ರಸ್ತೆ ಪಕ್ಕದಲ್ಲಿರುವ ಸುಮಾರು 1,700 ಎಕರೆ ಭೂಮಿಯಲ್ಲಿ ಲೇಔಟ್ ನಿರ್ಮಾಣ ಮಾಡುವ ವಿಚಾರವೂ ನ್ಯಾಯಾಲಯದಲ್ಲಿದೆ. 35 ವರ್ಷಗಳಾದರೂ ಭೂಮಾಲೀಕರಿಗೆ ಹಣ ನೀಡಲಾಗಿಲ್ಲ ಹಾಗೂ ಲೇಔಟ್ ಅಭಿವೃದ್ಧಿಯೂ ಆಗಿಲ್ಲ. ಇದರಿಂದ ಕಳೆದ ಮೂರು ದಶಕಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಗಮನ ಸೆಳೆದರು.

ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ ಅಥವಾ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾಗಲಿ ಈ ಕಂಪನಿಯ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ನೀಡಿದ 30 ವರ್ಷದ ಗುತ್ತಿಗೆ ರದ್ದುಪಡಿಸಿ ರಸ್ತೆ ವಶಕ್ಕೆ ಪಡೆದುಕೊಂಡರೆ ಮಾತ್ರ ಸೇತುವೆಗಳ ದುರಸ್ತಿ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular