ಕೊಪ್ಪಳ: ಇದೊಂದು ಸಿನಿಮಾ ಕಥೆಯನ್ನೇ ಮೀರಿಸುವಂತಹ ಸ್ಟೋರಿ. ಹಿಂದೂ ಯುವಕ-ಮುಸ್ಲಿಂ ಯುವತಿ ಬಸ್ ನಲ್ಲಿ ಆರಂಭವಾದ ಪರಿಚಯ ಪರಸ್ಪರ ಪ್ರೀತಿಗೆ ತಿರುಗಿದ್ದು, ಕುಟಿಭದ ವಿರೋಧದ ನಡುವೆಯೂ ಈ ಜೋಡಿ ವಿವಾಹವಾಗಿದ್ದು, ಇದೀಗ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೇಶ್ ಹಾಗೂ ತಸ್ಲೀಮಾ ಪ್ರೀತಿಸಿ ವಿವಾಹವಾಗಿರುವ ಜೋಡಿ. ಧರ್ಮದ ಹಂಗು ತೊರೆದು ಪ್ರೀತಿಸಿ ವಿವಾಹವಾಗಿರುವ ಯುವ ಜೋಡಿಗೆ ಈಗ ಜೀವಬೆದರಿಕೆ ಇದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಕನಕಗಿರಿ ತಾಲೂಕಿನ ಹುಲಿಹೈದರ್ ನಿವಾಸಿ ಕೇಶವ್ ಹಾಗೂ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದ ತಸ್ಲೀಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಸ್‌ನಲ್ಲಿ ಓಡಾಡುವಾಗ ಇವರ ಪರಿಚಯವಾಗಿತ್ತು. ಇತ್ತ ತಸ್ಲೀಮಾ ಮನೆಯಲ್ಲಿ ಆಕೆಗೆ ಬೇರೆಯವರ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಈ ಜೋಡಿ ಕನಕಗಿರಿಯ ಲಕ್ಷ್ಮೀ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಮದುವೆಯಲ್ಲಿ ಮುಸ್ಲಿಂ ಯುವತಿ ತಸ್ಲೀಮಾ ಹಣೆಗೆ ಕುಂಕುಮ ಇಟ್ಟು, ಅರಿಶಿಣ ಕೊಂಬು ಕಟ್ಟಿಕೊಂಡು ಹಿಂದೂ ಧರ್ಮದ ಸಂಪ್ರದಾಯದಂತೆ ಕೇಶವ್ ಕೈ ಹಿಡಿದಿದ್ದಾರೆ. ಮದುವೆಯಾದ ಬೆನ್ನಲ್ಲೇ ತಮಗೆ ಕುಟುಂಬದವರಿಂದ ತೊಂದರೆಯಾಗಬಹುದು ಎಂಬ ಭೀತಿಯಲ್ಲಿರುವ ಈ ಜೋಡಿ, ವಕೀಲರೊಂದಿಗೆ ಕೊಪ್ಪಳ ಎಸ್ಪಿ ಕಚೇರಿಗೆ ಬಂದು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ಮನೆಯವರಿಂದ ಏನಾದರೂ ತೊಂದರೆಯಾಗಬಹುದು ಎಂಬ ಭಯವಿದೆ. ಯಾರೂ ನಮಗೆ ಏನೂ ಮಾಡಬಾರದು, ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಬೇಕು ಎಂದು ತಸ್ಲೀಮಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಲವ್ ಜಿಹಾದ್‌ನಂತಹ ಪ್ರಕರಣಗಳ ಕುರಿತು ಭಾರಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಈ ಅನ್ಯ ಕೋಮಿನ ವಿವಾಹ ನೆರವೇರಿದ್ದು, ಕೊಪ್ಪಳದಲ್ಲಿ ಭಾರೀ ಚರ್ಚೆಗೆ ಕಾರಣವಗಿದೆ.

