ನವದೆಹಲಿ: ಬ್ರಿಟಿಷ್ ವಸಾಹತುಶಾಹಿ ಕಾಲದ ಕೇರಳ ಎಂಬ ಹೆಸರು ಇನ್ಮುಂದೆ ಇತಿಹಾಸ ಸೇರಲಿದ್ದು, ರಾಜ್ಯಕ್ಕೆ ಕೇರಳಂ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ. ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ್ದ ಕೇರಳಂ (ಮರುನಾಮಕರಣ) ಮಸೂದೆ, 2026’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದು, ಮಸೂದೆಯು ಕಾನೂನಾಗಿ ಜಾರಿಗೆ ಬಂದಿದೆ.ಸ್ವಾತಂತ್ರ್ಯ ಬಂದು ಏಳು ದಶಕಗಳ ಬಳಿಕ ಮಲಯಾಳಿಗಳ ಸಾಂಸ್ಕೃತಿಕ ಗುರುತಿಗೆ ಕೇಂದ್ರ ಸರ್ಕಾರ ಅಧಿಕೃತ ಮುದ್ರೆ ಒತ್ತಿದಂತಾಗಿದೆ.
ವಿಧಾನಸಭೆಯಿಂದ ಸಂಸತ್ತಿನವರೆಗೆ: ಮಸೂದೆಯ ಹಾದಿ
ವಿಧಾನಸಭೆ ನಿರ್ಣಯ: ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ಕೇರಳಂ ಎಂದೇ ಕರೆಯಲಾಗುತ್ತದೆ. ಹೀಗಾಗಿ ಸಂವಿಧಾನದ ಪ್ರಕಾರ ಹಾಗೂ ಎಲ್ಲ ಭಾಷೆಗಳಲ್ಲೂ ಅಧಿಕೃತವಾಗಿ ‘ಕೇರಳಂ’ ಎಂದೇ ಬದಲಾಯಿಸಬೇಕು ಎಂದು ಆಗ್ರಹಿಸಿ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ಆಡಳಿತ ಹಾಗೂ ವಿಪಕ್ಷಗಳ ಸರ್ವಸಮ್ಮತಿಯಿಂದ ಅಂಗೀಕಾರಗೊಂಡ ಈ ನಿರ್ಣಯವನ್ನು 2024ರ ಜೂನ್‌ನಲ್ಲಿ ಕೇಂದ್ರಕ್ಕೆ ರವಾನಿಸಲಾಗಿತ್ತು.
ಸಂಸತ್ತಿನ ಅನುಮೋದನೆ: ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಹಾಗೂ ರಾಷ್ಟ್ರಪತಿಗಳ ಸೂಚನೆ ಮೇರೆಗೆ ವಿಧಾನಸಭೆಯ ಪುನರ್ ಅನುಮೋದನೆ ಪಡೆದ ಮಸೂದೆಯನ್ನು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾಯಿತು. ಮಂಗಳವಾರ ಲೋಕಸಭೆ ಹಾಗೂ ಮರುದಿನ ರಾಜ್ಯಸಭೆಯಲ್ಲಿ ‘ಕೇರಳಂ ಮಸೂದೆ’ಗೆ ಅಂಗೀಕಾರ ದೊರೆಯಿತು.
ಸಂವಿಧಾನದಲ್ಲಿ ತಿದ್ದುಪಡಿ
ರಾಜ್ಯಗಳ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವ ಸಂವಿಧಾನದ 3ನೇ ವಿಧಿ ಅಡಿಯಲ್ಲಿ ಈ ಪ್ರಕ್ರಿಯೆ ನಡೆದಿದೆ. ಸಂವಿಧಾನದ ಮೊದಲನೇ ವೇಳಾಪಟ್ಟಿಯಲ್ಲಿ ಇರುವ ‘ಕೇರಳ’ ಎಂಬ ಹೆಸರನ್ನು ‘ಕೇರಳಂ’ ಎಂದು ತಿದ್ದುಪಡಿ ಮಾಡಲಾಗುತ್ತದೆ.ಈ ನಿರ್ಧಾರದಿಂದಾಗಿ ದೇಶ-ವಿದೇಶಗಳಲ್ಲಿರುವ ಲಕ್ಷಾಂತರ ಮಲಯಾಳಿಗಳ ದೀರ್ಘಕಾಲದ ಕನಸು ನನಸಾಗಿದ್ದು, ತಮ್ಮ ಭಾಷಿಕ ಹಾಗೂ ಸಾಂಸ್ಕೃತಿಕ ಗುರುತಿಗೆ ಸೂಕ್ತ ಗೌರವ ಸಿಕ್ಕಂತಾಗಿದೆ.

