ಇಂದು ( ಏಪ್ರಿಲ್ 29 ) ಪಶ್ಚಿಮ ಬಂಗಾಳದ ಎರಡನೇ ಹಂತದ ವಿಧಾನಸಭಾ ಮತದಾನ ಸಂಜೆ 6.30ಕ್ಕೆ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಲು ಅನುಮತಿ ದೊರಕಿದ್ದು, ಇತ್ತೀಚೆಗಳ ನಡೆದ ಪಂಚ ರಾಜ್ಯಗಳ ಚುನಾವಣೆಯ ಕುರಿತು ವಿವಿಧ ಸಮೀಕ್ಷೆಗಳು ತಮ್ಮ ಅಂಕಿಅಂಶಗಳನ್ನು ಪ್ರಕಟಿಸಿವೆ.
ಈ ಪೈಕಿ ಪೀಪಲ್ ಪಲ್ಸ್ ಮೊದಲಿಗೆ ವಿವಿಧ ರಾಜ್ಯಗಳ ತನ್ನ ಸಮೀಕ್ಷೆಯನ್ನು ಹೊರಹಾಕಿದ್ದು, ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿದೆ.
ಏಪ್ರಿಲ್ 9ರಂದು ಕೇರಳದ ಎಲ್ಲ 140 ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಈ ಪೈಕಿ 71 ಸೀಟುಗಳನ್ನು ಪಡೆಯಲಿರುವ ಪಕ್ಷ ಅಧಿಕಾರಕ್ಕೇರಲಿದೆ. ಪೀಪಲ್ ಪಲ್ಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ನೇತೃತ್ವದ ಯುಡಿಎಫ್ 75ರಿಂದ 85 ಸೀಟುಗಳನ್ನು ಗೆದ್ದು ಅಧಿಕಾರವನ್ನು ಹಿಡಿಯಲಿದ್ದು, ಪಿಣರಾಯಿ ವಿಜಯನ್ ಅವರ ಎಲ್‌ಡಿಎಫ್ 55ರಿಂದ 65 ಸೀಟುಗಳಲ್ಲಿ ಗೆದ್ದು ಅಧಿಕಾರ ಕಳೆದುಕೊಳ್ಳಲಿದೆ ಎಂದಿದೆ. ಇನ್ನು ಬಿಜೆಪಿ ನೇತೃತ್ವದ ಎನ್‌ಡಿಎ 0ಯಿಂದ 3 ಸೀಟುಗಳನ್ನು ಗೆಲ್ಲಬಹುದು ಎಂದೂ ಸಹ ಪ್ರಕಟಿಸಿದೆ.
ಈ ಮೂಲಕ ಯುಡಿಎಫ್ ಅಧಿಕಾರಕ್ಕೆ ಬರಲಿದ್ದು, ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ಪಿಣರಾಯಿ ವಿಜಯನ್ ಕನಸು ಭಗ್ನವಾಗಲಿದೆ ಎಂದು ಪೀಪಲ್ ಪಲ್ಸ್ ತಿಳಿಸಿದೆ.

