HomeKarnatakaರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣ ಭರಿಸಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ: ಸಿಎಂ ಸಿದ್ಧರಾಮಯ್ಯ

ರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣ ಭರಿಸಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ದೇಶದಲ್ಲಿಯೇ ಎರಡನೇ ಅತ್ಯಂತ ಹೆಚ್ಚಿನ ಒಣಭೂಮಿ ಹೊಂದಿರುವ ರಾಜ್ಯವಾದ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇರುವುದಲ್ಲದೇ, ರಾಜ್ಯದ ಹಲವು ಭಾಗಗಳಲ್ಲಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಮಿಶ್ರಣದ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬಗಳಿಗೆ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಲು ಜಲಮೂಲಗಳ ಸುಧಾರಣೆ ಮತ್ತು ಬೃಹತ್ ನೀರಿನ ಸರಬರಾಜು ವ್ಯವಸ್ಥೆಗೆ ಆದ್ಯತೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಲ ಜೀವನ ಮಿಷನ್ 2.0 ಸಂಬಂಧಿಸಿದ ತಿಳಿವಳಿಕೆ ಪತ್ರ ಸಹಿ ಹಾಕುವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಿದ್ಧರಾಮಯ್ಯ ಭಾಗವಹಿಸಿದ್ದರು.

ಅವರು ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಕರ್ನಾಟಕ ಯಾವುದೇ ರಾಜಿ ಮಾಡಿಕೊಳ್ಳದೆ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಈ ಯೋಜನೆಯಡಿ ಪ್ರತಿಯೊಂದು ಕಾಮಗಾರಿಗಳನ್ನು ಮೂರನೇ ಏಜೆನ್ಸಿ ಮೂಲಕ ಪರಿಶೀಲನೆ ನಡೆಸಲಾಗುತ್ತಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವು ಇದುವರೆಗೆ 101.31 ಲಕ್ಷ ಗ್ರಾಮೀಣ ಕುಟುಂಬಗಳ ಪೈಕಿ 88.06 ಮನೆಗಳಿಗೆ ನಳಸಂಪರ್ಕ ಕಲ್ಪಿಸಿದ್ದು, ಶೇ.86.93 ರಷ್ಟು ಪ್ರಗತಿ ಸಾಧಿಸಿದ್ದೇವೆ. ಈಗಾಗಲೇ ಕೈಗೊಳ್ಳಲಾಗಿರುವ 66,344 ಕಾಮಗಾರಿಗಳ ಪೈಕಿ ಸುಮಾರು 48,789 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ. ಇದರಲ್ಲಿ ಗ್ರಾಮಗಳಲ್ಲಿ 28,809 ಕಾಮಗಾರಿಗಳು ಹಾಗೂ 19,980 ಕಾಮಗಾರಿಗಳು ಶಾಲೆ, ಅಂಗನವಾಡಿಗಳಲ್ಲಿ ಕೈಗೊಳ್ಳಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ.

ಆದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ, ಕರ್ನಾಟಕ ರೂ.17,554.63 ಕೋಟಿ ಬಂಡವಾಳ ಹೂಡಿದೆ. ಇದರಲ್ಲಿ ಕೇಂದ್ರದ ಪಾಲಿನ ನಿರೀಕ್ಷೆಯಲ್ಲಿ ಹೂಡಲಾಗಿರುವ ರೂ.8,880.71 ಕೋಟಿಯೂ ಸೇರಿದ್ದು, ಇದು ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಯೋಜನೆ ಅನುಷ್ಠಾನದಲ್ಲಿ ರಾಜ್ಯ ಯಾವುದೇ ರೀತಿಯಲ್ಲಿ ರಾಜಿಯಾಗದೆ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದರೂ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ದುರದೃಷ್ಟಕರ.

ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಿದ್ದರೂ, ಕಳೆದ ಎರಡು ವರ್ಷಗಳಿಂದ ಕರ್ನಾಟಕಕ್ಕೆ ಹಣ ಬಿಡುಗಡೆಯಾಗಿಲ್ಲ. ಆದರೂ ರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣವನ್ನು ಭರಿಸಿ, ಯೋಜನೆ ಅನುಷ್ಠಾನ ಮುಂದುವರೆಯುವಂತೆ ನೋಡಿಕೊಂಡಿದೆ.

ಇದೇ ವೇಳೆ ನಾವು ಸದೃಢವಾದ ಸಾಂಸ್ಥಿಕ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಲು ಒತ್ತು ನೀಡಿದ್ದೇವೆ. ಆಪರೇಷನ್ & ಮೈಂಟೆನೆನ್ಸ್‌ ನೀತಿಯನ್ನು ಅನುಷ್ಠಾನಗೊಳಿಸಿದ ಹಾಗೂ ಚಾಲನೆ ನೀಡಿದ ಮೊದಲ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಗ್ರಾಮೀಣ ಜಲ  ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿದ್ದು, ಸಮಿತಿಗಳಲ್ಲಿ ಲಿಂಗ ಸಮಾತೋಲವನ್ನು ಕಾಯ್ದುಕೊಳ್ಳಲಾಗಿದೆ. ಕಾರ್ಯಾಚರಣೆಗೆಂದೇ ಮೀಸಲಾದ ಪಿಎಂಯು ಅನ್ನು ಸ್ಥಾಪಿಸಲಾಗಿದ್ದು, ಜೀವ ಜಲ ಅಪ್ಲಿಕೇಶನ್, ಜಿ.ಐ.ಎಸ್ ಆಧಾರಿತ ಭೂ ನಿರ್ವಹಣೆ, ಸಮಯೋಚಿತ ನಿರ್ವಹಣಾ ವ್ಯವಸ್ಥೆ ಮುಂತಾದ ಡಿಜಿಟಲ್ ನಾವೀನ್ಯತೆಗಳ ಮೂಲಕ ಆಡಳಿತ ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗಿದೆ. 1.51 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಬಗ್ಗೆ ತರಬೇತಿ ನೀಡುವ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮಹತ್ವ ನೀಡಿದೆ.

ಗುಣಮಟ್ಟ ಖಾತ್ರಿಪಡಿಸಲು ಕರ್ನಾಟಕವು ಬ್ಯೂರೋ ವೆರಿಟಾಸ್ ಸಂಸ್ಥೆಯನ್ನು ಸ್ವತಂತ್ರ ಪರಿಶೀಲನೆ, ಮಾದರಿ ಆಧಾರಿತ ತಪಾಸಣೆ, ದಾಖಲೆಗಳ ಪರಿಶೀಲನೆ, ತಾಂತ್ರಿಕ ಪರೀಕ್ಷೆಗಳಿಗಾಗಿ ನೇಮಿಸಿದ್ದು, ತನ್ಮೂಲಕ ಕಾಮಗಾರಿಗಳ ಸುಸ್ಥಿರ ಕಾರ್ಯಶೀಲತೆಯನ್ನು ದೃಢಪಡಿಸಲಾಗುತ್ತಿದೆ.

ನೀರಿನ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಇದು ಜ್ಞಾನ ಮತ್ತು ನಿರ್ದೇಶನ ಕೇಂದ್ರ(knowledge and command hub) ವಾಗಿ ಕಾರ್ಯನಿರ್ವಹಿಸಲಿದೆ. 259 ಗ್ರಾಮಗಳಿಗೆ ಈಗಾಗಲೇ 24/7 ನೀರಿನ ಸರಬರಾಜು ಸಾಧಿಸಲಾಗಿದ್ದು, ಈ ಮಿಷನ್‌ಗಿರುವ ಪರಿವರ್ತನಾ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿದೆ. 

ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕರ್ನಾಟಕ ಸಂಪೂರ್ಣವಾಗಿ ಬದ್ಧವಾಗಿದೆ. ಮುಂಗಡ ವೆಚ್ಚದ ಮರುಪಾವತಿಗಳು ಸೇರಿದಂತೆ ಬಾಕಿಯಿರುವ ಎಲ್ಲಾ ಅನುದಾನವನ್ನು ಶೀಘ್ರವೇ ಬಿಡುಗಡೆ  ಮಾಡುವಂತೆ ಕೇಂದ್ರ ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ. ಎಲ್ಲ ಗ್ರಾಮೀಣ ನಿವಾಸಿಗಳಿಗೆ ಸುರಕ್ಷಿತ ಮತ್ತು ಸುಸ್ಥಿರ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರದ ಜೊತೆ ಕೆಲಸ ಮಾಡುವುದನ್ನು ಹೀಗೆಯೇ ಮುಂದುವರಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ಜಲ ಜೀವನ ಮಿಷನ್‌ 2.0 ಕುರಿತಂತೆ ಕೇಂದ್ರ ಜಲ ಶಕ್ತಿ ಸಚಿವರಾದ ಸಿ.ಆರ್‌.ಪಾಟೀಲ್‌ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಸಿಎಂ ಪಾಲ್ಗೊಂಡಿದ್ದರು.

ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್.ಪಾಟೀಲ್, ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ದೆಹಲಿಯಿಂದ ಪಾಲ್ಗೊಂಡರು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular