ಡೆಹ್ರಾಡೂನ್: ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ಕೇದಾರನಾಥ ಹಾಗೂ ಬದರಿನಾಥ ದೇವಾಲಗಳ ಬಾಗಿಲು ತೆರೆಯುವ ದಿನಾಂಕ ಪ್ರಕಟವಾಗಿದೆ.
ಏಪ್ರಿಲ್ 22ರಂದು ಕೇದಾರನಾಥ ದೇವಾಲಯದ ಬಾಗಿಲು ತೆರಲಿದ್ದು, ಏಪ್ರಿಲ್ 23ರಂದು ಬದರಿನಾಥ ದೇವಾಲಯದ ಬಾಗಿಲು ತೆರೆಯಲಿದೆ. ಈಗಾಗಲೇ ಚಾರ್ ಧಾಮ್ ಯಾತ್ರೆಗೆ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದೆ.
ಚಾರ್ ಧಾಮ್ ಯಾತ್ರೆಗೆ ಮಾರ್ಚ್ 6ರಿಂದ ಆನ್ ಲೈನ್ ನೋಂದಣಿ ಆರಂಭವಾಗಿದ್ದು, ಮೊಬೈಲ್ ಆಪ್ ಮೂಲಕವೂ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಛೋಟಾ ಚಾರ್ ಧಾಮ್ ಯಾತ್ರೆ ಏಪ್ರಿಲ್ 17ರಿಂದ ಆರಂಭವಾಗಲಿದೆ. ಯಾತ್ರೆ ಆರಂಭವಾಗುವ ಎರಡುದಿನಗಳ ಮೊದಲು ಆಫ್ ಲೈನ್ ನೊಂದಣಿ ಕೂಡ ಇರಲಿದೆ. ಇದಕ್ಕಾಗಿ ರಿಷಿಕೇಶ, ಹರಿದ್ವಾರ ಮತ್ತು ಡೆಹ್ರಾಡೂನ್ ನಲ್ಲಿ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು ಎಂದು ದೇವಾಲಯದ ಸಮಿತಿ ತಿಳಿಸಿದೆ.
ಏಪ್ರಿಲ್ 19ರಂದು ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲು ತೆರೆಯುವುದರೊಂದಿಗೆ ತೀರ್ಥಯಾತ್ರೆ ಆರಂಭವಾಗಲಿದೆ. ಕೇದಾರನಾಥ ಹಾಗೂ ಬದರಿನಾಥ ದೇವಾಲಯಗಳಿಗೆ ಈ ವರ್ಷದಿಂದ ಹಿಂದೂಯೇತರ ಭಕ್ತರ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ದೇವಾಲಯದ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಈ ಪ್ರಸ್ತಾವನೆಗೆ ದೇವಾಲಯದ ಸಮಿತಿಯ ಅನುಮೋದನೆ ಕೂಡ ದೊರೆತಿದೆ.
ಹಿಂದೂಯೇತರರಿಗೆ ದೇವಾಕಯದ ಸಂಕೀರ್ಣ ಹಾಗೂ ಗರ್ಭಗುಡಿಯ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಕೇದಾರನಾಥ ಹಾಗೂ ಬದರಿನಾಥ ದೇವಾಲಯಗಳು ಪ್ರವಾಸಿ ತಾಣಗಳಲ್ಲ. ಇವು ಧಾರ್ಮಿಕ ಕೇಂದ್ರಗಳಾಗಿವೆ. ಈ ಎರಡೂ ಸ್ಥಳಗಳು ಆದಿ ಶಂಕರಾಚಾರ್ಯರು ಸ್ಥಾಪಿಸಿದ ವೈದಿಕ ಕೇಂದ್ರಗಳಾಗಿವೆ. ಯಾತ್ರೆ ಹಾಗೂ ಇತರ ಮಾಹಿತಿಗಳಿಗಾಗಿ ದೇವಾಲಯದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

