ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ತಲೆದೋರಿರುವ ಅಡುಗೆ ಅನಿಲ (LPG) ಅಭಾವದ ಬಿಸಿ ಇದೀಗ ಕರ್ನಾಟಕದ ಅರಣ್ಯಗಳ ಮೇಲೆ ತಟ್ಟುವ ಆತಂಕ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಸೌದೆಗೆ ಬೇಡಿಕೆ ಹೆಚ್ಚುತ್ತಿದ್ದು, ಅರಣ್ಯ ಲೂಟಿ ತಡೆಯಲು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅರಣ್ಯ, ಸರ್ಕಾರಿ ಜಮೀನು ಅಥವಾ ರಸ್ತೆ ಬದಿಯ ಮರಗಳನ್ನು ಅಕ್ರಮವಾಗಿ ಕತ್ತರಿಸಿದರೆ ಆಯಾ ವಲಯದ ಅರಣ್ಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಸಚಿವರು ಎಚ್ಚರಿಸಿದ್ದಾರೆ.ಅರಣ್ಯದಂಚಿನ ಪ್ರದೇಶಗಳು ಮತ್ತು ಸರ್ಕಾರಿ ನೆಡುತೋಪುಗಳಲ್ಲಿ ಮರಗಳ ಕಳ್ಳತನವಾಗದಂತೆ ತಡೆಯಲು ಎಲ್ಲಾ ವಲಯಗಳಲ್ಲಿ ತೀವ್ರ ನಿಗಾ ವಹಿಸಲು ಮತ್ತು ಗಸ್ತು ವ್ಯವಸ್ಥೆಯನ್ನು ಬಲಪಡಿಸಲು ಆದೇಶಿಸಲಾಗಿದೆ.
ಸೌದೆಗೆ ಹೆಚ್ಚಿದ ಬೇಡಿಕೆ: ವಾಣಿಜ್ಯ ಮತ್ತು ಗೃಹ ಬಳಕೆ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಹೋಟೆಲ್‌ಗಳು ಮತ್ತು ಮನೆಗಳಲ್ಲಿ ಸೌದೆಯ ಬಳಕೆ ಹೆಚ್ಚಾಗುತ್ತಿದೆ. ಇದನ್ನು ಬಳಸಿಕೊಂಡು ಅರಣ್ಯ ಲೂಟಿಯಾಗದಂತೆ ತಡೆಯುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ.
ಕಟ್ಟುನಿಟ್ಟಿನ ಮುನ್ನೆಚ್ಚರಿಕೆ: ಅಕ್ರಮ ಮರ ಕಡಿತಲೆ ತಡೆಯುವಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಮ್ಮ ಅಧಿಕೃತ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.


