ಬೆಂಗಳೂರು : ಕೆನಡಾದ ಟೊರೊಂಟೊದಲ್ಲಿ ಕನ್ನಡಿಗ ಚಂದನ್ ಕುಮಾರ್ (37) ಅವರ ಹತ್ಯೆ ಕುರಿತಂತೆ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಕೆನಡಾದ ಟೊರೊಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನ್ನಡಿಗ ಚಂದನ್ ಕುಮಾರ್ ಹತ್ಯೆಯಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ‘X’ (ಟ್ವಿಟರ್) ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.
’ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಬೆಂಗಳೂರಿನ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರು ಗುಂಡಿನ ದಾಳಿಯಲ್ಲಿ ಹತ್ಯೆಗೀಡಾಗಿರುವ ಸುದ್ದಿ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ. ಮೃತರಿಗೆ ಭಾವಪೂರ್ಣ ನಮನಗಳು. ಭಗವಂತನು ಮೃತರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ. ಕುಟುಂಬ ವರ್ಗದವರಿಗೆ ಈ ನೋವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ. ಕರ್ನಾಟಕದಲ್ಲಿ ನೆಲೆಸಿರುವ ದುಃಖತಪ್ತ ಕುಟುಂಬದವರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಚಂದನ್ ಕುಮಾರ್ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸುವಂತೆ ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕ ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ಘಟನೆಯಿಂದ ಕೆನಾಡದಲ್ಲಿ ನೆಲೆಸಿರುವ ಕನ್ನಡಿಗರು ಆತಂಕ ಪಡುವುದು ಬೇಡ. ಎಲ್ಲ ಕನ್ನಡಿಗರ ಸುರಕ್ಷತೆಗೆ ಕರ್ನಾಟಕ ಸರ್ಕಾರವು ಕಟುಬದ್ಧವಾಗಿದೆ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಚಂದನ್ ಕುಮಾರ್ (37), ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದವರು.ಫೆಬ್ರವರಿ 7, 2026 ರಂದು ಟೊರೊಂಟೊದ ವುಡ್ಬೈನ್ ಶಾಪಿಂಗ್ ಸೆಂಟರ್ನ ಪಾರ್ಕಿಂಗ್ ಲಾಟ್ನಲ್ಲಿ ಅಪರಿಚಿತ ದುಷ್ಕರ್ಮಿಗಳು ಚಂದನ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇವರು ಕೆನಡಾದಲ್ಲಿ ಐಟಿ ಉದ್ಯೋಗಿಯಾಗಿದ್ದು, ‘ಟೊರೊಂಟೊ ಕನ್ನಡ ಸಂಘ’ ಮತ್ತು ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಚಂದನ್ ಕುಮಾರ್ ಅವರ ತಂದೆ ನಂದಕುಮಾರ್ (ನಿವೃತ್ತ ಶಿಕ್ಷಕ) ಮತ್ತು ತಾಯಿ ಶೈಲಜಾ ಅವರು ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಸರ್ಕಾರದ ಸಹಾಯವನ್ನು ಎದುರು ನೋಡುತ್ತಿದ್ದಾರೆ.

