ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹಧನ ನೀಡುತ್ತಿದ್ದು, ಇದನ್ನು ಇನ್ನು ಎರಡು ರೂಪಾಯಿ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದ ಕೊನಘಟ್ಟ ಗ್ರಾಮದಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ರಾಜ್ಯದಲ್ಲಿಯೂ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹಧನ ನೀಡುತ್ತಿಲ್ಲ. ಕರ್ನಾಟಕದಲ್ಲಿ ಮಾತ್ರ ರೈತರಿಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈಗ ಇದನ್ನು ಎರಡು ರೂಪಾಯಿ ಹೆಚ್ಚಿಸಿ ಹೆಚ್ಚು ಪ್ರೋತ್ಸಾಹಧನ ನೀಡುವ ಚಿಂತನೆ ಇದ್ದು, ಸರ್ಕಾರ ಆದಷ್ಟು ಬೇಗನೆ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ನಂದಿನಿ ಹಾಲಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ರುಚಿ, ಬೆಲೆ, ತೂಕ ಸೇರಿದಂತೆ ಗುಣಮಟ್ಟ ನಂಬಿಕೆಗೆ ನಂದಿನಿ ಅರ್ಹವಾಗಿದೆ. ರೈತರು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಗುಣಮಟ್ಟದ ಹಾಲು ನೀಡಬೇಕು ಎಂದು ಹೇಳಿದ್ದಾರೆ.

