ಬೆಳಗಾವಿ: ಜಾತ್ರೆಯ ಮೆರವಣಿಗೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆಬ್ರವರಿ 5ರಂದು ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಲಕ್ಷ್ಮೀದೇವಿ ಕಳಸಾರೋಹಣ ಮೆರವಣಿಗೆ ವೇಳೆ ಘಟನೆ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಖಂಡ ಬಾವುರಾವ್ ಗಡಕರಿ ಪರವಾನಿಗೆ ಹೊಂದಿದ್ದ ಗನ್ ನಿಂದ ಮೆರವಣಿಗೆಯ ವೇಳೆ ಗಾಳಿಯಲ್ಲಿ ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಫೈರಿಂಗ್ ನಡೆಸಿದ ಹಿನ್ನೆಲೆಯಲ್ಲಿ ಕಾಕತಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಗನ್ ಜಪ್ತಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಬಾವುರಾವ್ ಗೆ ನೋಟಿಸ್ ನೀಡಿದ್ದಾರೆ.

