ರಾಂಚಿ: ಮಗನ ರೋಗ ಗುಣಪಡಿಸಲು ಮಾಟಗಾತಿಯ ಮಾತು ಕೇಳಿದ ತಾಅಯಿಯೊಬ್ಬಳು ಅನ್ನ ಮಗಳನ್ನೇ ನರಬಲಿ ಕೊಟ್ಟಿರುವ ಅಮಾನವೀಯ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಬಾಲಕಿಯ ತಾಯಿ, ಆಕೆಯ ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ. ಕುಸುಂಭ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 24ರ ಸಂಜೆ ಗ್ರಾಮದಲ್ಲಿ ರಾಮ ನವಮಿ ಮೆರವಣಿಗೆ ನಡೆಯುತ್ತಿತ್ತು ಅಂದು ಬಾಲಕಿ ನಾಅಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ 8.30 ರ ಸುಮಾರಿಗೆ ಸ್ಥಳೀಯ ಮಾಧ್ಯಮಿಕ ಶಾಲೆಯ ಹಿಂಭಾಗದ ಬಿದಿರಿನ ತೋಪಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಸಂತ್ರಸ್ತೆಯ ತಾಯಿ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ, ಆರಂಭದಲ್ಲಿ ಧನೇಶ್ವರ ಪಾಸ್ವಾನ್ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ವೇಳೆ ಪ್ರಕರಣ ಹೊಸ ತಿರುವು ಪಡೆದಿದೆ.
ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕರು ಮತ್ತು ಹಜಾರಿಬಾಗ್ ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದ ಮೇರೆಗೆ ಮಾರ್ಚ್ 26 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಯಿತು. ತನಿಖೆಯ ಸಮಯದಲ್ಲಿ, ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿದ್ದು, ಬಾಲಕಿ ಸಾವಿಗೆ ಆಕೆಯ ತಾಯಿಯೇ ಕಾರಣ ಎಂಬುದು ಗೊತ್ತಾಗಿದೆ.
ಭಗ್ತಿನ್ ಎಂದೂ ಕರೆಯಲ್ಪಡುವ 55 ವರ್ಷದ ಶಾಂತಿ ದೇವಿ ಎಂಬಾಕೆ, ತಾಂತ್ರಿಕ ಆಚರಣೆಗಳನ್ನು ನಡೆಸುವುದಾಗಿ ಹೇಳಿಕೊಂಡಿದ್ದು, ಆರೋಪಿ ಮಹಿಳೆ ಬಳಿ ನಿನ್ನ ಮಗನ ಅನಾರೋಗ್ಯವನ್ನು ಗುಣಪಡಿಸಲು ಮತ್ತು ಕುಟುಂಬದ ಸಮಸ್ಯೆಗಳನ್ನು ನಿವಾರಿಸಲು ನರಬಲಿ ಕೊಡಲೇಬೇಕು ಎಂದು ಹೇಳಿದಾಗ ಆಕೆಯ ಮಾತನ್ನು ನಂಬಿದ ಬಾಲಕಿ ತಾಯಿ ತನ್ನ ಮಗಳನ್ನು ಬಲಿಕೊಟ್ಟಿದ್ದಾಳೆ.
ಮೂರು ತಿಂಗಳಿನಿಂದ ಮಾಟಗಾತಿ ತಂತ್ರಿಯೊಂದಿಗೆ ಬಾಲಕಿ ತಾಯಿ ಸಂಪರ್ಕದಲ್ಲಿದ್ದಳು. ಪ್ರಿಯಕರ ಭೀಮ್ ರಾಮ್ (40) ಜೊತೆ, ಪೂಜೆಯ ನೆಪದಲ್ಲಿ ಬಾಲಕಿಯನ್ನು ತಂತ್ರಿಯ ಮನೆಗೆ ಕರೆದೊಯ್ದರು. ಆರಂಭಿಕ ವಿಧಿವಿಧಾನಗಳ ನಂತರ, ಮಗುವನ್ನು ಹತ್ತಿರದ ಬಿದಿರಿನ ತೋಪಿಗೆ ಕರೆದೊಯ್ಯಲಾಯಿತು. ಭೀಮ್ ರಾಮ್ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ಬಾಲಕಿ ತಾಯಿ ಬಾಲಕಿ ಕಷ್ಟಪಡುತ್ತಿದ್ದಂತೆ ಆಕೆಯ ಕಾಲುಗಳನ್ನು ಹಿಡಿದಿದ್ದಾಳೆ ಎಂದು ಆರೋಪಿಸಲಾಗಿದೆ.
ಬಾಲಕಿಯ ಗುಪ್ತಾಂಗಗಳೊಳಗೆ ಮರದ ಕೋಲನ್ನು ಹಾಕಿದ್ದಾರೆ. ಭೀಮ್ ರಾಮ್ ಆಕೆಯ ತಲೆಗೆ ಹೊಡೆದು ರಕ್ತವನ್ನು ತೆಗೆದುಕೊಂಡಿದ್ದಾನೆ. ನಂತರ ಶವವನ್ನು ಸ್ಥಳದಲ್ಲಿಯೇ ಬಿಟ್ಟಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾಟ ಹಾಗೂ ಹಾನಿಕಾರಕ ಮೂಢನಂಬಿಕೆಗಳನ್ನು ಅನುಸರಿಸಿ ತಾಯಿಯೊಬ್ಬಳು ತನ್ನ ಮಗಳನ್ನೇ ಬಲಿಕೊಟ್ಟಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.

