ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದೆ. ನೀರಿನ ಬಕೆಟ್’ಗೆ ಬಿದ್ದು ಮಗು ಸಾವನ್ನಪ್ಪಿದ್ದನ್ನು ಕಂಡು ಮರುಗಿದ ತಾಯಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ತಾಯಿ ಪ್ರತಿಭಾ (39) ಮತ್ತು ಮಗ ಅಗಸ್ತ್ಯ.ಎಂದು ಗುರುತಿಸಲಾಗಿದೆ. ಪ್ರತಿಭಾ ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದರು. ಪ್ರತಿಭಾ ಅವರು ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದರು.ಪ್ರತಿಭಾ ಅವರು ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಟೆರೇಸ್ಗೆ ಹೋಗಿದ್ದ ಸಮಯದಲ್ಲಿ, ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್’ಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ.
ಆತ್ಮಹತ್ಯೆಗೆ ಶರಣಾದ ತಾಯಿ: ಟೆರೇಸ್ ನಿಂದ ವಾಪಸ್ ಬಂದ ಪ್ರತಿಭಾ ಅವರು ಮಗುವಿನ ಸ್ಥಿತಿಯನ್ನು ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಗುವಿನ ಸಾವಿಗೆ ತಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು: ಕೆಲಸ ಮುಗಿಸಿ ಪತಿ ಮಹಂತೇಶ್ ಅವರು ರಾತ್ರಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯ ಬಾಗಿಲು ತೆಗೆಯದಿದ್ದಾಗ ತಮ್ಮಲ್ಲಿದ್ದ ಕೀಲಿಯಿಂದ ಬಾಗಿಲು ತೆರೆದು ನೋಡಿದಾಗ ಪತ್ನಿ ನೇಣಿಗೆ ಶರಣಾಗಿರುವುದು ಮತ್ತು ಮಗು ಹಾಸಿಗೆಯ ಮೇಲೆ ಶವವಾಗಿರುವುದು ಕಂಡುಬಂದಿದೆ.
ಡೆತ್ ನೋಟ್ ನಲ್ಲಿ ಏನಿದೆ.?
ಪೊಲೀಸರಿಗೆ ಮನೆಯಲ್ಲಿಡೆತ್ ನೋಟ್ ಲಭ್ಯವಾಗಿದ್ದು, ಅದರಲ್ಲಿ “ನಾನು ಬಟ್ಟೆ ತರಲು ಮೇಲೆ ಹೋಗಿದ್ದಾಗ ಮಗು ಬಕೆಟ್ಗೆ ಬಿದ್ದು ಸತ್ತಿದೆ. ನನ್ನ ಮಗುವನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ, ಹಾಗಾಗಿ ನಾನು ಸಾಯುತ್ತಿದ್ದೇನೆ” ಎಂದು ಪ್ರತಿಭಾ ಬರೆದಿದ್ದಾರೆ. ಮೊದಲು ಮಾತ್ರೆಗಳನ್ನು ನುಂಗಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅವರು, ನಂತರ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಂದು ಪುಟ್ಟ ನಿರ್ಲಕ್ಷ್ಯ ಮತ್ತು ಆಕಸ್ಮಿಕ ಘಟನೆ ಒಂದು ಸುಂದರ ಕುಟುಂಬವನ್ನೇ ಬಲಿಪಡೆದಿರುವುದು ಸ್ಥಳೀಯರಲ್ಲಿ ಕಣ್ಣೀರು ತರಿಸಿದೆ.

