ಸಿನಿಮಾಗಳಲ್ಲಿ ನಾವು ರೂಪಾಂತರಗೊಳ್ಳುವ ವಾಹನಗಳನ್ನು ನೋಡಿರುತ್ತೇವೆ. ಆದರೆ ಜಪಾನ್ ದೇಶವು ಇದನ್ನು ನಿಜಜೀವನದಲ್ಲಿ ನನಸು ಮಾಡಿದೆ. ರಸ್ತೆಯ ಮೇಲೆ ಸಾಮಾನ್ಯ ಬಸ್ಸಿನಂತೆ ಸಂಚರಿಸುವ ವಾಹನವೊಂದು ಕೇವಲ 15 ಸೆಕೆಂಡ್‌ಗಳಲ್ಲಿ ರೈಲಾಗಿ ರೂಪಾಂತರಗೊಳ್ಳುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಇದನ್ನು ‘ಡ್ಯುಯಲ್ ಮೋಡ್ ವೆಹಿಕಲ್’ (DMV) ಎಂದು ಕರೆಯಲಾಗುತ್ತದೆ.
ಹೇಗೆ ಕೆಲಸ ಮಾಡುತ್ತೆ ಈ ಬಸ್-ಟ್ರೈನ್? ನೋಡಲು ಮಿನಿ ಬಸ್ಸಿನಂತೆ ಕಾಣುವ ಈ ಡಿಎಂವಿ, ರಸ್ತೆಯ ಮೇಲೆ ಓಡಲು ರಬ್ಬರ್ ಟೈರ್‌ಗಳನ್ನು ಹೊಂದಿರುತ್ತದೆ. ಆದರೆ ರೈಲ್ವೆ ಹಳಿಗಳ ಬಳಿ ಬಂದ ತಕ್ಷಣ, ವಾಹನದ ಒಳಗಿರುವ ಸ್ಟೀಲ್ ಚಕ್ರಗಳು ಕೆಳಕ್ಕೆ ಇಳಿಯುತ್ತವೆ. ಕೇವಲ 15 ಸೆಕೆಂಡುಗಳಲ್ಲಿ ರಬ್ಬರ್ ಟೈರ್‌ಗಳು ಮೇಲಕ್ಕೆ ಹೋಗಿ, ಸ್ಟೀಲ್ ಚಕ್ರಗಳು ಹಳಿಯ ಮೇಲೆ ಕುಳಿತು ರೈಲಾಗಿ ಬದಲಾಗುತ್ತದೆ. ಜಪಾನ್‌ನ ಕಾಯೋ ನಗರದಲ್ಲಿ ಈ ವಿಶಿಷ್ಟ ಸೇವೆ ಲಭ್ಯವಿದೆ.
ವೇಗ ಮತ್ತು ವಿಶೇಷತೆ: ಈ ವಾಹನವು ರಸ್ತೆಯ ಮೇಲೆ ಗಂಟೆಗೆ 60 ಕಿಮೀ ವೇಗದಲ್ಲಿ ಚಲಿಸಿದರೆ, ಹಳಿಗಳ ಮೇಲೆ ರೈಲಿನಂತೆ ಗಂಟೆಗೆ 100 ಕಿಮೀ ವೇಗದಲ್ಲಿ ಅಬ್ಬರಿಸುತ್ತದೆ. ಒಂದು ಬಾರಿಗೆ 21 ರಿಂದ 23 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಇದರಲ್ಲಿದೆ. ಸದ್ಯಕ್ಕೆ ಇದು ಡೀಸೆಲ್ ಎಂಜಿನ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಜಪಾನ್‌ನ ಶಿಕೊಕು ದ್ವೀಪದಲ್ಲಿ 2021 ರಿಂದ ಈ ಸೇವೆ ಆರಂಭವಾಗಿದ್ದು, ಕೊಚ್ಚಿ ಪ್ರಿಫೆಕ್ಚರ್‌ನಿಂದ ಟೋಕುಶಿಮಾ ಪ್ರಿಫೆಕ್ಚರ್ ನಡುವೆ ಪ್ರತಿದಿನ ಸಂಚರಿಸುತ್ತಿದೆ.
ಸಾರಿಗೆ ಕ್ಷೇತ್ರದಲ್ಲಿ ಹೊಸ ಆಯಾಮ: ಅಸಾ ಕೋಸ್ಟ್ ರೈಲ್ವೆ ಈ ಸೇವೆಯನ್ನು ನಿರ್ವಹಿಸುತ್ತಿದೆ. ಈ ತಂತ್ರಜ್ಞಾನದಿಂದ ಪ್ರಯಾಣಿಕರಿಗೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ. ಈ ವಾಹನವೇ ಮನೆ ಅಥವಾ ಪ್ರಮುಖ ನಿಲ್ದಾಣಗಳಿಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು, ನಂತರ ಹಳಿಗಳ ಮೇಲೆ ರೈಲಾಗಿ ಪ್ರಯಾಣ ಬೆಳೆಸುತ್ತದೆ. ಗ್ರಾಮೀಣ ಭಾಗದ ಕಡಿದಾದ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕವನ್ನು ಸುಲಭಗೊಳಿಸಲು ಇದು ವರದಾನವಾಗಿದೆ.
ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಾ ಈ ಅಪರೂಪದ ವಾಹನದಲ್ಲಿ ಪ್ರಯಾಣಿಸುವುದು ಪ್ರವಾಸಿಗರಿಗೆ ಒಂದು ಮರೆಯಲಾಗದ ಅನುಭವ ನೀಡುತ್ತಿದೆ. ಜಪಾನ್‌ನ ಈ ಅದ್ಭುತ ಪ್ರಯೋಗ ಇನ್ನುಳಿದ ರಾಷ್ಟ್ರಗಳಿಗೂ ಮಾದರಿಯಾಗಿದೆ.

