ಬೆಂಗಳೂರು ಮೂಲದ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ 2025ನೇ ಸಾಲಿನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತೀಯರು ಕೇವಲ ಹಾಲು, ಮೊಸರು ಮಾತ್ರವಲ್ಲದೆ ಬಂಗಾರ, ಸ್ಮಾರ್ಟ್‌ಫೋನ್ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ದಿನಬಳಕೆ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಿದ್ದಾರೆ. ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಸಾಮಾನು ತಲುಪಿಸುವ ಈ ವ್ಯವಸ್ಥೆಯನ್ನು ಭಾರತೀಯರು ಅಕ್ಷರಶಃ ಅಪ್ಪಿಕೊಂಡಿದ್ದಾರೆ.
ಲಕ್ಷಾಂತರ ರೂಪಾಯಿಯ ವಿಚಿತ್ರ ಆರ್ಡರ್‌ಗಳು ಈ ವರ್ಷದ ಅತ್ಯಂತ ದೊಡ್ಡ ಆರ್ಡರ್‌ಗಳಲ್ಲಿ ಮುಂಬೈನ ಬಳಕೆದಾರರೊಬ್ಬರು ಬರೋಬ್ಬರಿ 16.3 ಲಕ್ಷ ರೂಪಾಯಿ ಮೌಲ್ಯದ ‘ರೆಡ್ ಬುಲ್ ಶುಗರ್ ಫ್ರೀ’ ಎನರ್ಜಿ ಡ್ರಿಂಕ್ ಆರ್ಡರ್ ಮಾಡಿ ಗಮನ ಸೆಳೆದಿದ್ದಾರೆ. ಅದೇ ರೀತಿ ಬೆಂಗಳೂರಿನ ವ್ಯಕ್ತಿಯೊಬ್ಬರು ಕೇವಲ ನೂಡಲ್ಸ್‌ಗಾಗಿ ಬರೋಬ್ಬರಿ 4.36 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಐಫೋನ್ ಒಳಗೊಂಡಂತೆ ಒಂದೇ ಕಾರ್ಟ್‌ನಲ್ಲಿ 4.3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಲಾಗಿದೆ.
ಕಾಂಡೋಮ್ ಮತ್ತು ರೋಮ್ಯಾನ್ಸ್ ವರದಿಯ ಪ್ರಕಾರ ಪ್ರತಿ 127 ಆರ್ಡರ್‌ಗಳಲ್ಲಿ ಒಂದು ಕಾಂಡೋಮ್ ಆರ್ಡರ್ ಇರುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕಾಂಡೋಮ್ ಮಾರಾಟದಲ್ಲಿ ಶೇ. 24ರಷ್ಟು ಏರಿಕೆ ಕಂಡುಬಂದಿದೆ. ವಿಶೇಷವೆಂದರೆ ಚೆನ್ನೈನ ವ್ಯಕ್ತಿಯೊಬ್ಬರು ವರ್ಷದಲ್ಲಿ 228 ಬಾರಿ ಕಾಂಡೋಮ್ ಆರ್ಡರ್ ಮಾಡಿದ್ದು, ಅದಕ್ಕಾಗಿ ಒಟ್ಟು 1.06 ಲಕ್ಷ ರೂಪಾಯಿ ವ್ಯಯಿಸಿದ್ದಾರೆ. ಇನ್ನು ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು 31,240 ರೂಪಾಯಿ ಮೌಲ್ಯದ ಗುಲಾಬಿ ಹೂವುಗಳನ್ನು ತರಿಸಿಕೊಂಡಿದ್ದಾರೆ.
ಬೆಂಗಳೂರಿಗರ ಟಿಪ್ಪಿಂಗ್ ಉದಾರತೆ ಬೆಂಗಳೂರು ಮತ್ತೊಮ್ಮೆ ತನ್ನ ಉದಾರತೆಯನ್ನು ಸಾಬೀತುಪಡಿಸಿದೆ. ನಗರದ ವ್ಯಕ್ತಿಯೊಬ್ಬರು ಡೆಲಿವರಿ ಬಾಯ್ಸ್‌ಗೆ ವರ್ಷದಲ್ಲಿ ಬರೋಬ್ಬರಿ 68,600 ರೂಪಾಯಿಗಳನ್ನು ಕೇವಲ ‘ಟಿಪ್ಸ್’ ರೂಪದಲ್ಲಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬೆಂಗಳೂರಿನ ಮತ್ತೊಬ್ಬ ಗ್ರಾಹಕರು 1.7 ಲಕ್ಷ ರೂಪಾಯಿಯ ಐಫೋನ್ ಜೊತೆಗೆ 178 ರೂಪಾಯಿಯ ಲೈಮ್ ಸೋಡಾವನ್ನು ಆರ್ಡರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ದಿನಬಳಕೆ ವಸ್ತುಗಳಲ್ಲೂ ದಾಖಲೆ ಭಾರತದಲ್ಲಿ ಪ್ರತಿ ಸೆಕೆಂಡಿಗೆ 4 ಪ್ಯಾಕೆಟ್‌ಗಿಂತ ಹೆಚ್ಚು ಹಾಲು ಮಾರಾಟವಾಗುತ್ತಿದೆ. ಕೇರಳದ ಕೊಚ್ಚಿಯ ವ್ಯಕ್ತಿಯೊಬ್ಬರು ವರ್ಷದ 365 ದಿನಗಳ ಪೈಕಿ 368 ಬಾರಿ ಕರಿಬೇವನ್ನು ಆರ್ಡರ್ ಮಾಡಿದ್ದಾರೆ! ಇನ್ನು ರಾತ್ರಿ ವೇಳೆಯ ಸ್ನಾಕ್ಸ್ ವಿಷಯಕ್ಕೆ ಬಂದರೆ ಸ್ಮಾರ್ಟ್‌ಫೋನ್‌ಗಿಂತ ಹೆಚ್ಚಾಗಿ ಮಸಾಲಾ ಫ್ಲೇವರ್‌ನ ಚಿಪ್ಸ್ ಆರ್ಡರ್‌ಗಳು ಮೊದಲ ಸ್ಥಾನದಲ್ಲಿವೆ. ದೇಶದ 10 ಪ್ರಮುಖ ನಗರಗಳ ಪೈಕಿ 9 ನಗರಗಳಲ್ಲಿ ಚಿಪ್ಸ್ ಅತಿ ಹೆಚ್ಚು ಮಾರಾಟವಾದ ಸ್ನಾಕ್ಸ್ ಆಗಿದೆ.

