ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಜನಿವಾರ ತೆಗೆಸಿದ ಕಾಲೇಜಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಗಳು ಜನಿವಾರ ತೆಗೆಸಿದ ವಿಚಾರ ಖಂಡಿಸಿ ಪೋಷಕರಿಂದ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾಲೇಜಿನ ಮಾನ್ಯತೆ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು. ಮತ್ತೊಂದೆಡೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕರಣದ ತನಿಖೆಗೆ ಆದೇಶ ನೀಡಿದೆ. ಈ ಬೆಳವಣಿಗೆ ನಡುವೆಯೇ ಬೆಂಗಳೂರು ನಗರ ಡಿಸಿ ಜಗದೀಶ್ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದ ಮಡಿವಾಳದ ಕೃಪಾನಿಧಿ ಕಾಲೇಜಿನ ಬಗ್ಗೆ ವರದಿ ನೀಡಲು ಕುಂದಾಗಿದ್ದಾರೆ.
ಕೃಪಾನಿಧಿ ಕಾಲೇಜಿನಲ್ಲಿ ಇನ್ಮುಂದೆ ಸರ್ಕಾರಿ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಸೋದಾಗಿ ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರ ಸಂಬಂಧ ಕೃತ್ಯ ಎಸಗಿರೋದು ಯಾರು ಎಂಬ ಬಗ್ಗೆ ತನಿಖೆ ಮಾಡಲಾಗಿದೆ. ವಸ್ತ್ರಸಂಹಿತೆ ಬಗ್ಗೆ ತರಬೇತಿ ನೀಡಿದ್ದರೂ ಇಷ್ಟೆಲ್ಲ ಸಮಸ್ಯೆಯಾಗಿದೆ. ಜನಿವಾರ ಘಟನೆಯಲ್ಲಿ ಕರ್ತವ್ಯ ಲೋಪವಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ಮುಮುಂದೆ ಸರ್ಕಾರಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದಿದ್ದಾರೆ.
ಪರೀಕ್ಷಾರ್ಥಿಗಳ ಜನಿವಾರನ್ನು ಉದ್ದೇಶಪೂರ್ವಕವಾಗಿ ತೆಗಿಸಲಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ನು ಮುಂದೆ ಪರೀಕ್ಷಾ ಕೇಂದ್ರ ನೀಡದಂತೆ ವರದಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಪತ್ರ ಬರೆದು ಕೆಇಎ ಕೂಡ ಆಗ್ರಹಿಸಿತ್ತು.
ಇದರ ಬೆನ್ನಲ್ಲೇ ಕೃಪಾನಿಧಿ ಕಾಲೇಜು ಆಡಳಿತ ಮಂಡಳಿ ಪರೀಕ್ಷಾ ಕೇಂದ್ರದಲ್ಲಿದ್ದ ಮೂವರು ಸಿವ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.

