HomeBusinessಕರೆಂಟ್ ಬಿಲ್ ಕಿರಿಕಿರಿಗೆ ಗುಡ್ ಬೈ: ಮಧ್ಯಮ ವರ್ಗದ ಮನೆಗಳಿಗೆ ಸೋಲಾರ್ ಲಾಭದಾಯಕವೇ? ಇಲ್ಲಿದೆ ಕಂಪ್ಲೀಟ್...

ಕರೆಂಟ್ ಬಿಲ್ ಕಿರಿಕಿರಿಗೆ ಗುಡ್ ಬೈ: ಮಧ್ಯಮ ವರ್ಗದ ಮನೆಗಳಿಗೆ ಸೋಲಾರ್ ಲಾಭದಾಯಕವೇ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ಭಾರತೀಯ ಗ್ರಾಹಕರು ಸದಾ ಬೆಲೆ ಮತ್ತು ಉಳಿತಾಯದ ಬಗ್ಗೆ ಹೆಚ್ಚು ಜಾಗರೂಕರು. ಹಾಗಾಗಿಯೇ ಇಂದು ಮನೆಗಳ ಮೇಲೆ ಸೋಲಾರ್ ಅಳವಡಿಕೆ ಎಂಬುದು ಕೇವಲ ಪರಿಸರ ಪ್ರೇಮದ ವಿಷಯವಾಗಿ ಉಳಿದಿಲ್ಲ, ಬದಲಾಗಿ ಅದೊಂದು ಆರ್ಥಿಕ ಲಾಭದ ಹೂಡಿಕೆಯಾಗಿ ಮಾರ್ಪಟ್ಟಿದೆ. ಒಮ್ಮೆ ಹಣ ಹೂಡಿ, ಮುಂದಿನ ಎರಡೂವರೆ ದಶಕಗಳ ಕಾಲ ವಿದ್ಯುತ್ ಬಿಲ್‌ನಿಂದ ಮುಕ್ತಿ ಪಡೆಯುವ ಈ ಯೋಜನೆ ಮಧ್ಯಮ ವರ್ಗದವರನ್ನು ಸೆಳೆಯುತ್ತಿದೆ.

ಲೆಕ್ಕಾಚಾರ ಹೀಗಿದೆ: ತಜ್ಞರ ಪ್ರಕಾರ, ಭಾರತದಲ್ಲಿ ಅಳವಡಿಸಲಾಗುವ ರೂಫ್ ಟಾಪ್ ಸೋಲಾರ್ ಸಿಸ್ಟಮ್‌ಗಳ ವೆಚ್ಚವು ಕೇವಲ 3 ರಿಂದ 5 ವರ್ಷಗಳಲ್ಲಿ ವಾಪಸ್ ಬರುತ್ತದೆ. ಸೋಲಾರ್ ಪ್ಯಾನಲ್‌ಗಳು ಸುಮಾರು 25 ರಿಂದ 27 ವರ್ಷಗಳ ಕಾಲ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ, ಆರಂಭಿಕ ಹೂಡಿಕೆ ವಾಪಸ್ ಬಂದ ನಂತರದ 20-22 ವರ್ಷಗಳ ಕಾಲ ಗ್ರಾಹಕರಿಗೆ ಉಚಿತ ವಿದ್ಯುತ್ ಸಿಕ್ಕಂತಾಗುತ್ತದೆ.

ಸಾಮಾನ್ಯವಾಗಿ ತಿಂಗಳಿಗೆ 300 ರಿಂದ 500 ಯೂನಿಟ್ ವಿದ್ಯುತ್ ಬಳಸುವ ನಗರ ಪ್ರದೇಶದ ಮನೆಗಳಿಗೆ 3 ಕಿಲೋ ವ್ಯಾಟ್ (kW) ನಿಂದ 5 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ವ್ಯವಸ್ಥೆ ಸೂಕ್ತ. ಭಾರತದಲ್ಲಿ 1 ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ ವರ್ಷಕ್ಕೆ ಸುಮಾರು 1,400 ರಿಂದ 1,450 ಯೂನಿಟ್ ವಿದ್ಯುತ್ ಉತ್ಪಾದಿಸುತ್ತದೆ. ಅಂದರೆ 3 ಕಿಲೋ ವ್ಯಾಟ್ ಸಿಸ್ಟಮ್ ವರ್ಷಕ್ಕೆ ಅಂದಾಜು 4,200 ಯೂನಿಟ್ ವಿದ್ಯುತ್ ನೀಡಬಲ್ಲದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಬ್ಸಿಡಿ ಎಂಬ ವರದಾನ: ಸೋಲಾರ್ ಅಳವಡಿಕೆಗೆ ತಗಲುವ ಆರಂಭಿಕ ವೆಚ್ಚವನ್ನು ತಗ್ಗಿಸಲು ಸರ್ಕಾರ ಭರ್ಜರಿ ಸಬ್ಸಿಡಿ ನೀಡುತ್ತಿದೆ. ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ ಅಡಿಯಲ್ಲಿ ಕೇಂದ್ರ ಸರ್ಕಾರವು 78,000 ರೂಪಾಯಿಗಳವರೆಗೆ ಸಹಾಯಧನ ನೀಡುತ್ತಿದೆ. ಇದರ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ತಮ್ಮದೇ ಆದ ಪ್ರತ್ಯೇಕ ಸಬ್ಸಿಡಿಗಳನ್ನು ನೀಡುತ್ತಿವೆ. ಇದು ಮಧ್ಯಮ ವರ್ಗದವರಿಗೆ ಸೋಲಾರ್ ಅಳವಡಿಕೆಯನ್ನು ಇನ್ನಷ್ಟು ಸುಲಭವಾಗಿಸಿದೆ.

ಗಮನಿಸಬೇಕಾದ ಅಂಶಗಳು: ಸೋಲಾರ್ ಅಳವಡಿಸುವಾಗ ಕೇವಲ ಕಡಿಮೆ ಬೆಲೆಗೆ ಮಾರುಹೋಗಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಪ್ಯಾನಲ್‌ಗಳ ಗುಣಮಟ್ಟ, ಅಳವಡಿಸುವ ತಾಂತ್ರಿಕತೆ ಮತ್ತು ಕಂಪನಿಯ ನಂತರದ ಸೇವೆ ಬಹಳ ಮುಖ್ಯ. ಮಳೆಗಾಲದಲ್ಲಿ ವಿದ್ಯುತ್ ಉತ್ಪಾದನೆ ಸ್ವಲ್ಪ ಕಡಿಮೆಯಾದರೂ, ಬೇಸಿಗೆಯ ಅಧಿಕ ಉತ್ಪಾದನೆಯು ಇಡೀ ವರ್ಷದ ಸರಾಸರಿಯನ್ನು ಸರಿದೂಗಿಸುತ್ತದೆ. ಹಾಗಾಗಿ ಮಳೆಗಾಲದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ.

ದಿನದಿಂದ ದಿನಕ್ಕೆ ಏರುತ್ತಿರುವ ವಿದ್ಯುತ್ ದರದಿಂದ ರಕ್ಷಣೆ ಪಡೆಯಲು ಸೋಲಾರ್ ಅತ್ಯುತ್ತಮ ಮಾರ್ಗ. ಒಮ್ಮೆ ಅಳವಡಿಸಿದರೆ ಭವಿಷ್ಯದಲ್ಲಿ ವಿದ್ಯುತ್ ದರ ಎಷ್ಟು ಏರಿಕೆಯಾದರೂ ನಿಮ್ಮ ಜೇಬಿಗೆ ಕತ್ತರಿ ಬೀಳುವುದಿಲ್ಲ. ಇದೊಂದು ಆಸ್ತಿಯಂತೆಯೇ ಕಾರ್ಯನಿರ್ವಹಿಸಿ ಪ್ರತಿ ತಿಂಗಳು ನಿಮ್ಮ ಹಣವನ್ನು ಉಳಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular