ನಮ್ಮ ದೈನಂದಿನ ಆಹಾರದಲ್ಲಿ ನಮಗೆ ತಿಳಿಯದಂತೆ ಸಕ್ಕರೆ ಸೇರ್ಪಡೆಯಾಗುತ್ತಿರುತ್ತದೆ. ಇದು ಕೇವಲ ತೂಕ ಹೆಚ್ಚಿಸುವುದು ಮಾತ್ರವಲ್ಲದೆ ಮಧುಮೇಹ ಮತ್ತು ಹೃದ್ರೋಗಗಳಿಗೂ ಕಾರಣವಾಗಬಹುದು. ಅತಿಯಾದ ಸಕ್ಕರೆ ಸೇವನೆಯು ದೇಹದ ಮೆಟಬಾಲಿಸಂ ಅಥವಾ ಚಯಾಪಚಯ ಕ್ರಿಯೆಯನ್ನು ಹೇಗೆ ಹಾಳುಮಾಡುತ್ತದೆ ಎಂಬ ಬಗ್ಗೆ ಮಧುಮೇಹ ತಜ್ಞ ಡಾ ರಾಜೀವ್ ಕೋವಿಲ್ ಅವರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಸಕ್ಕರೆಯಿಂದಾಗುವ ಅಪಾಯಗಳು ಸಕ್ಕರೆಯ ಸೇವನೆಯು ಮಿತವಾಗಿದ್ದರೆ ತೊಂದರೆಯಿಲ್ಲ. ಆದರೆ ಅದು ಮಿತಿಮೀರಿದಾಗ ಫ್ಯಾಟಿ ಲಿವರ್, ಕೀಲು ನೋವು, ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು ಮತ್ತು ಅಕಾಲಿಕ ವಯಸ್ಸಾದಂತೆ ಕಾಣುವ ಲಕ್ಷಣಗಳು ಎದುರಾಗುತ್ತವೆ. ಮಕ್ಕಳಲ್ಲಿ ಇದು ಬೊಜ್ಜು ಮತ್ತು ಹಲ್ಲಿನ ಕುಳಿಗಳಿಗೆ ಕಾರಣವಾಗುತ್ತದೆ. ಬಿಳಿ ಸಕ್ಕರೆಯು ಯಾವುದೇ ಪೋಷಕಾಂಶಗಳಿಲ್ಲದ ಬರಿ ಕ್ಯಾಲೊರಿಗಳನ್ನು ನೀಡಿದರೆ, ಹಣ್ಣುಗಳಲ್ಲಿರುವ ನೈಸರ್ಗಿಕ ಸಕ್ಕರೆಯು ಫೈಬರ್ ಮತ್ತು ವಿಟಮಿನ್ ಗಳೊಂದಿಗೆ ದೇಹಕ್ಕೆ ಸೇರುವುದರಿಂದ ಸ್ವಲ್ಪ ಮಟ್ಟಿಗೆ ಸುರಕ್ಷಿತವಾಗಿದೆ.
ಹಣ್ಣಿನ ರಸಕ್ಕಿಂತ ಹಣ್ಣು ತಿನ್ನುವುದೇ ಉತ್ತಮ ಹಣ್ಣಿನ ರಸವನ್ನು ಕುಡಿಯುವುದಕ್ಕಿಂತ ಹಣ್ಣನ್ನು ಅಗಿದು ತಿನ್ನುವುದು ಹೆಚ್ಚು ಆರೋಗ್ಯಕರ. ಹಣ್ಣಿನ ರಸದಲ್ಲಿ ನಾರಿನಂಶ ಇರುವುದಿಲ್ಲ ಮತ್ತು ಒಂದು ಲೋಟ ರಸದಲ್ಲಿ ಸುಮಾರು ಮೂರರಿಂದ ನಾಲ್ಕು ಹಣ್ಣುಗಳ ಸಕ್ಕರೆ ಇರುತ್ತದೆ. ಇದು ನೇರವಾಗಿ ಲಿವರ್ ಮೇಲೆ ಪರಿಣಾಮ ಬೀರಬಹುದು. ಅತಿಯಾದ ಫ್ರಕ್ಟೋಸ್ ಅಂಶವು ದೇಹದಲ್ಲಿ ಹಸಿವನ್ನು ಕಡಿಮೆ ಮಾಡುವ ಹಾರ್ಮೋನ್ ಗಳ ಮೇಲೆ ಪ್ರಭಾವ ಬೀರುವುದಿಲ್ಲ, ಇದರಿಂದಾಗಿ ಜನರು ತಮಗೆ ತಿಳಿಯದಂತೆ ಅತಿಯಾಗಿ ಸೇವನೆ ಮಾಡುತ್ತಾರೆ. ಇದು ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲು ಪ್ರಮುಖ ಕಾರಣವಾಗಿದೆ.
ಜೇನುತುಪ್ಪ ಮತ್ತು ಸಕ್ಕರೆಯ ನಡುವಿನ ವ್ಯತ್ಯಾಸವೇನು ಜೇನುತುಪ್ಪವನ್ನು ಅನೇಕರು ಔಷಧಿಯಂತೆ ಭಾವಿಸುತ್ತಾರೆ. ಆದರೆ ಮೆಟಬಾಲಿಸಂ ದೃಷ್ಟಿಯಿಂದ ನೋಡಿದರೆ ಜೇನುತುಪ್ಪ ಕೂಡ ಸಕ್ಕರೆಯೇ ಆಗಿದೆ. ಇದರಲ್ಲಿ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಅಂಶಗಳಿದ್ದು, ಇದು ಬಿಳಿ ಸಕ್ಕರೆಯಂತೆಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಲ್ಲಿ ಅಲ್ಪ ಪ್ರಮಾಣದ ಆಂಟಿಆಕ್ಸಿಡೆಂಟ್ ಗಳಿದ್ದರೂ ಸಕ್ಕರೆಯ ಪ್ರಭಾವವನ್ನು ಇದು ಕಡಿಮೆ ಮಾಡುವುದಿಲ್ಲ. ಹೀಗಾಗಿ ಮಧುಮೇಹಿಗಳು ಮತ್ತು ತೂಕ ಇಳಿಸುವವರು ಜೇನುತುಪ್ಪವನ್ನು ಕೂಡ ಸಕ್ಕರೆಯಷ್ಟೇ ಮಿತವಾಗಿ ಬಳಸಬೇಕು.
ಆಹಾರದಲ್ಲಿ ಸಕ್ಕರೆ ಕಡಿತಗೊಳಿಸಲು ಸಲಹೆಗಳು ನಾವು ಸೇವಿಸುವ ಬಿಸ್ಕೆಟ್, ಸಾಸ್ ಮತ್ತು ಪ್ಯಾಕ್ ಮಾಡಲಾದ ಆಹಾರಗಳಲ್ಲಿ ಸಕ್ಕರೆ ಅಡಗಿರುತ್ತದೆ. ಹಿರಿಯರು ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಏಕೆಂದರೆ ಸಕ್ಕರೆಯು ಮರೆವಿನ ಕಾಯಿಲೆಗೂ ಕಾರಣವಾಗಬಹುದು. ಸಕ್ಕರೆಯನ್ನು ಸಂಪೂರ್ಣವಾಗಿ ಬಿಡುವುದಕ್ಕಿಂತ ಹೆಚ್ಚಾಗಿ, ಕೃತಕವಾಗಿ ಸಕ್ಕರೆ ಸೇರಿಸಿದ ಆಹಾರಗಳಿಂದ ದೂರವಿರುವುದು ಮತ್ತು ನಮ್ಮ ನಾಲಿಗೆಗೆ ಕಡಿಮೆ ಸಿಹಿಯ ಅಭ್ಯಾಸ ಮಾಡಿಸುವುದು ಆರೋಗ್ಯಕ್ಕೆ ಉತ್ತಮ ನಿರ್ಧಾರವಾಗಿದೆ.

