ಭಾರತೀಯ ಇತಿಹಾಸದಲ್ಲಿ ಶ್ರೀನಿವಾಸ ರಾಮಾನುಜನ್ ನಂತರ ಅಷ್ಟೇ ಪ್ರಭಾವಶಾಲಿ ಗಣಿತಜ್ಞ ಎಂದು ಯಾರನ್ನಾದರೂ ಗುರುತಿಸುವುದಾದರೆ ಅದು ವಶಿಷ್ಠ ನಾರಾಯಣ ಸಿಂಗ್. ಬಿಹಾರದ ಬಸಂತಪುರ ಎಂಬ ಪುಟ್ಟ ಹಳ್ಳಿಯಲ್ಲಿ 1942ರಲ್ಲಿ ಜನಿಸಿದ ಈ ಅಪ್ರತಿಮ ಪ್ರತಿಭೆ, ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದರು. ಆದರೆ ವಿಧಿಯ ಆಟ ಈ ಮೇಧಾವಿಯ ಜೀವನವನ್ನು ಅಯೋಮಯಗೊಳಿಸಿತು.
23ನೇ ವಯಸ್ಸಿಗೆ ಪಿಎಚ್‌ಡಿ ಮತ್ತು ನಾಸಾ ಪಯಣ ವಶಿಷ್ಠ ನಾರಾಯಣ ಸಿಂಗ್ ಅವರ ಬುದ್ಧಿವಂತಿಕೆ ಎಷ್ಟಿತ್ತೆಂದರೆ, ಅವರ ಕಾಲೇಜು ದಿನಗಳಲ್ಲೇ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಪತಿಗಳು ಇವರಿಗಾಗಿ ನಿಯಮಗಳನ್ನು ಸಡಿಲಿಸಿ ಇವರ ಶಿಕ್ಷಣ ಬೇಗ ಮುಗಿಯುವಂತೆ ಮಾಡಿದ್ದರು. ಕೇವಲ 23ನೇ ವಯಸ್ಸಿಗೆ ಪಿಎಚ್‌ಡಿ ಪೂರೈಸಿದ ಇವರು ಅಮೆರಿಕದ ನಾಸಾದಲ್ಲಿ ಕೆಲಸ ಮಾಡುವ ಅವಕಾಶ ಪಡೆದರು. ಐನ್ ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನೇ (Theory of Relativity) ಸವಾಲು ಹಾಕಿದ್ದ ಇವರ ಬಗ್ಗೆ ಒಂದು ರೋಚಕ ಕಥೆಯಿದೆ. ನಾಸಾದ ಕಂಪ್ಯೂಟರ್‌ಗಳು ಸ್ಥಗಿತಗೊಂಡಾಗ ವಶಿಷ್ಠ ನಾರಾಯಣ ಸಿಂಗ್ ಅವರು ಕೈಯಲ್ಲೇ ಮಾಡಿದ ಲೆಕ್ಕಾಚಾರಗಳು ಕಂಪ್ಯೂಟರ್ ನೀಡಬೇಕಿದ್ದ ಉತ್ತರಕ್ಕೆ ನಿಖರವಾಗಿ ತಾಳೆಯಾಗಿದ್ದವಂತೆ.
ಭಾರತಕ್ಕೆ ಮರಳಿದ ಗಣಿತ ಗಾರುಡಿಗ ಅಮೆರಿಕದಲ್ಲಿ 9 ವರ್ಷಗಳ ಕಾಲ ಮಿಂಚಿದ ನಂತರ ಭಾರತದ ಮೇಲಿನ ಪ್ರೀತಿಯಿಂದ ವಾಪಸ್ ಬಂದ ಇವರು ಐಐಟಿ ಕಾನ್ಪುರ, ಟಿಐಎಫ್‌ಆರ್ ಮುಂಬೈ ಮತ್ತು ಐಎಸ್ ಐ ಕೋಲ್ಕತ್ತಾದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬೋಧನೆ ಮಾಡಿದರು. ಶ್ರೀನಿವಾಸ ರಾಮಾನುಜನ್ ಅವರಂತೆಯೇ ದೊಡ್ಡ ಸಾಧನೆ ಮಾಡುವ ಎಲ್ಲಾ ಲಕ್ಷಣಗಳು ಇವರಲ್ಲಿತ್ತು. ಆದರೆ ದುರಂತವೆಂದರೆ 1970ರ ದಶಕದ ಮಧ್ಯಭಾಗದಲ್ಲಿ ಇವರಿಗೆ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆ ಆವರಿಸಿತು.
ಸಂಸಾರದಲ್ಲಿ ಬಿರುಕು ಮತ್ತು ನಿಗೂಢ ನಾಪತ್ತೆ ಮಾನಸಿಕ ಕಾಯಿಲೆಯಿಂದಾಗಿ 1976ರಲ್ಲಿ ಇವರ ಪತ್ನಿ ಇವರಿಂದ ದೂರಾದರು. ಇದು ಇವರ ವೃತ್ತಿಜೀವನದ ಮೇಲೆ ಭಾರಿ ಹೊಡೆತ ನೀಡಿತು. 80ರ ದಶಕದ ಮಧ್ಯಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಹಲವಾರು ವರ್ಷಗಳ ಕಾಲ ಈ ಮೇಧಾವಿ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿಯಲಿಲ್ಲ. 1992ರಲ್ಲಿ ಇವರು ತಮ್ಮ ಸ್ವಂತ ಊರಿನಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ, ಅಲೆಮಾರಿಯಂತೆ ಬದುಕುತ್ತಿರುವುದು ಪತ್ತೆಯಾದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು.
ಕೊನೆಯ ದಿನಗಳು ಮತ್ತು ಮರಣೋತ್ತರ ಗೌರವ ನಟ ಶತ್ರುಘ್ನ ಸಿನ್ಹಾ ಅವರಂತಹ ಗಣ್ಯರು ಇವರಿಗೆ ದೆಹಲಿಯ ಐಎಚ್‌ಬಿಎಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಿದರು. ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡ ಇವರು ಮತ್ತೆ ಅಕಾಡೆಮಿಕ್ ಕ್ಷೇತ್ರಕ್ಕೆ ಮರಳಲು ಪ್ರಯತ್ನಿಸಿದರೂ ಹಳೆಯ ವೈಭವ ಮರುಕಳಿಸಲಿಲ್ಲ. ನವೆಂಬರ್ 14, 2019 ರಂದು ತಮ್ಮ 72ನೇ ವಯಸ್ಸಿನಲ್ಲಿ ಇವರು ಇಹಲೋಕ ತ್ಯಜಿಸಿದರು. ಇವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಭಾರತದ ಈ ಗಣಿತದ ಹುಲಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಮತ್ತು ಬೆಂಬಲ ಸಿಗದೆ ಕಮರಿ ಹೋದದ್ದು ದೇಶದ ವಿಜ್ಞಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

