ಬೆಂಗಳೂರು: ಐಪಿಎಲ್- 2026 ಉದ್ಘಾಟನಾ ಪಂದ್ಯ ಮಾಅರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್ ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದೆ.
ಈ ವೇಳೆ ಮಾತನಾಡಿದ ಆರ್ ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದರು.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದ ಬಳಿಕ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಗ್ರೌಂಡ್ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮರಾಗಳ ಜೊತೆಗೆ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜನಸಂದಣಿ ಹೆಚ್ಚಾದ ಸ್ಥಳಗಳನ್ನು ಗುರುತಿಸಿ ತಕ್ಷಣ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೂರು ಕಮಾಂಡ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಎರಡು ಕ್ರೀಡಾಂಗಣದಲ್ಲಿ ಮತ್ತು ಒಂದು ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ.
ಇಂದು ಸಂಜೆಯಿಂದ ಟಿಕೆಟ್ ಬುಕ್ಕಿಂಗ್ ಆರಂಭ:
ಇಂದು ಸಂಜೆ 4 ಗಂಟೆಯಿಂದ ಟಿಕೆಟ್ ಮಾರಾಟ ಆರಂಭವಾಗಲಿದೆ. ಮೆಟ್ರೋ ಟಿಕೆಟ್ ಲಿಂಕ್ ಮಾಡುವ ವ್ಯವಸ್ಥೆ ಜಾರಿಗೆ ತರುವ ಹಿನ್ನೆಲೆಯಲ್ಲಿ ಟಿಕೆಟ್ ಮಾರಾಟ ಸ್ವಲ್ಪ ತಡವಾಗಿದೆ. ಟಿಕೆಟ್ ಜೊತೆ ಪಾರ್ಕಿಂಗ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯೂ ಇದೆ. ಪಂದ್ಯ ಆರಂಭಕ್ಕೆ ನಾಲ್ಕು ಗಂಟೆಗಳ ಮುಂಚೆಯೇ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತದೆ. ಕ್ರೀಡಾಂಗಣದ ಸುತ್ತಮುತ್ತ ಕಾರುಗಳಿಗೆ ಎಂಟ್ರಿ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಸದ ವೆಬ್‌ಸೈಟ್‌ಗಳ ಮೂಲಕ ಟಿಕೆಟ್ ಖರೀದಿಸಬಾರದು ಎಂದು ಆರ್‌ಸಿಬಿ ಮನವಿ ಮಾಡಿದೆ. ಆರ್ ಸಿಬಿ ಅಧಿಕೃತ ವೆಬ್ ಸೈಟ್ ಮೂಲಕವೇ ಟಿಕೆಟ್ ಖರೀದಿಸಲು ಸೂಚಿಸಿದೆ.
ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಗೌರವ:
ಕಳೆದ ವರ್ಷದ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ, ಆಟಗಾರರು 11 ನಂಬರ್ ಜರ್ಸಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಜೊತೆಗೆ ಕ್ರೀಡಾಂಗಣದಲ್ಲಿ 11 ಸೀಟ್‌ಗಳನ್ನು ಖಾಲಿ ಬಿಡುವ ಮೂಲಕ ಗೌರವ ಸಲ್ಲಿಸಲಾಗುತ್ತದೆ ಎಂದು ತಂಡದ ಮ್ಯಾನೇಜ್ಮೆಂಟ್ ತಿಳಿಸಿದೆ.
ಈ ಬಾರಿ ಯಶ್ ದಯಾಳ್ ಪ್ಲೇಯಿಂಗ್ ಸ್ಕ್ವಾಡ್‌ನಲ್ಲಿ ಇರುವುದಿಲ್ಲ ಎಂದು ಮೋ ಬೋಬಾಟ್ ಸ್ಪಷ್ಟಪಡಿಸಿದರು. ಆದರೆ ಅವರು ತಂಡದ ಜೊತೆ ಮುಂದುವರೆಯಲಿದ್ದಾರೆ. ಜೋಶ್ ಹೇಜಲ್‌ವುಡ್ ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ ಎಂದರು.
ಈ ಸೀಸನ್‌ನಲ್ಲಿ ರಾಯಪುರದಲ್ಲೂ ಆರ್‌ಸಿಬಿ ಪಂದ್ಯಗಳು ನಡೆಯಲಿವೆ. ಅಲ್ಲಿನ ರಾಜ್ಯ ಸರ್ಕಾರ ಜಿಎಸ್‌ಟಿ ಸಡಿಲಿಕೆ ನೀಡಿರುವುದಾಗಿ ಮಾಹಿತಿ ನೀಡಿದೆ ಎಂದು ಆರ್ ಸಿಬಿ ತಿಳಿಸಿದೆ.

