ಬೆಳಗಾವಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ದಿನದಿಂದ ದಿನಕ್ಕೆ ಮುಂದುವರೆಯುತ್ತಲೇ ಇದೆ. ಎಲ್ ಪಿಜಿ ಸಿಲಿಂಡರ್, ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯವುಂಟಾಗಿದ್ದು, ಹೋಟೆಲ್ ಉದ್ಯಮಗಳು ನೆಲಕಚ್ಚಿವೆ. ರಾಜ್ಯದಲ್ಲಿ ಅಡುಗೆ ಸಿಲಿಂಡರ್ ಸಿಗದೇ ಒಂದೆಡೆ ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ಹೋಟೆಲ್ ಗಳು ಬಾಗಿಲು ಮುಚ್ಚುತ್ತಿವೆ. ದಿನದಿಂದ ದಿನಕ್ಕೆ ಉಂಟಾಗುತ್ತಿರುವ ನಷ್ಟ ಭರಿಸಲಾಗದೇ ಹೋಟೆಲ್ ಮಾಲೀಕರು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಅಡುಗೆ ಅನಿಲದ ಅಭಾವದಿಂದ ಹೋಟೆಲ್ ನಡೆಸಲಾಗದೇ ಹೋಟೆಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯಲ್ಲಿ ಸಿಲಿಂಡರ್ ಸಿಗದೇ ಹೋಟೆಲ್ ನಡೆಸಲು ಸಾಧ್ಯವಾಗದೇ ಹೋಟೆಲ್ ಮಾಲೀಕರೊಬ್ಬರು ತಮ್ಮದೇ ಹೋಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹನುಮಾನ್ ಹೋಟೆಲ್ ಮಾಲಿಕ ರಾಮ ಹಳ್ಳೂರಿ (50) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಇಂದು ಮುಂಜಾನೆ ೬ಗಂಟೆಗೆ ರಾಮ ಹಳ್ಳೂರಿ ಹೋಟೆಲ್ ಗೆ ಬಂದವರು ಹಗ್ಗದಿಂದ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೇ ರಾಮ ಹಳ್ಳೂರಿ ಕಂಗೆಟ್ಟಿದ್ದರು.ಸಿಲಿಂಡರ್ ಇಲ್ಲದೇ ಹೋಟೆಲ್ ನಡೆಸಲಾಗದೇ ವ್ಯಾಪಾರ ಸಂಪೂರ್ಣ್ ಬಂದ್ ಆಗಿತ್ತು. ಹೋಟೆಲ್ ಬಾಡಿಗೆ, ಕಾರ್ಮಿಕರ ಸಂಬಳ ಎಲ್ಲವೂ ತಲೆಯಮೇಲೆ ಬಿದ್ದಿತ್ತು. ಸಾಲವನ್ನೂ ತೀರಿಸಲಾಗದ ಸ್ಥಿತಿ ಎದುರಾಗಿತ್ತು. ಇದರಿಂದ ಕಂಗಾಲಾಗಿದ್ದ ರಾಮ ಹಳ್ಳೂರಿ ತೀವ್ರವಾಗಿ ಮನನೊಂದಿದ್ದರು.
ತಂದೆಯ ಸಾವಿನ ಬಗ್ಗೆ ಮಾತನಾಡಿರುವ ರಾಮ ಹಳ್ಳೂರಿ ಮಗ ಉದಯ ಹಳ್ಳೂರಿ, ಕಳೆದ ಒಂದು ವಾರದಿಂದ ಅಡುಗೆ ಅನಿಲ ಅಭಾವದಿಂದಾಗಿ ವ್ಯಾಪಾರ ಕುಂಟಿತಗೊಂಡಿತ್ತು, ಪ್ರತಿ ದಿನ ಹೋಟೆಲ್ ಬಾಡಿಗೆ ಮತ್ತು ಸಾಲದ ಮೊತ್ತ ನೀಡಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು. ಇದರಿಂದ ತಂದೆ ಬೇಸತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇಂದು ಮುಂಜಾನೆ ಹೋಟೆಲ್ ಗೆ ಬಂದವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಹುಕ್ಕೇರಿ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

