ಇಂದು ( ಮೇ 18 ) ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 63ನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಎರಡೂ ತಂಡಗಳ ಪ್ಲೇಆಫ್ ಪ್ರವೇಶದ ಹಾದಿಯನ್ನು ನಿರ್ಧರಿಸಲಿರುವ ಕಾರಣ ಮಹತ್ವವನ್ನು ಪಡೆದುಕೊಂಡಿದ್ದು, ಭಾರೀ ಕುತೂಹಲ ಹುಟ್ಟುಹಾಕಿದೆ.
ಸನ್ ರೈಸರ್ಸ್ ಹೈದರಾಬಾದ್ ಇಲ್ಲಿಯವರೆಗೂ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು ಉಳಿದ 5 ಪಂದ್ಯಗಳಲ್ಲಿ ಸೋಲುವ ಮೂಲಕ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, 12 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ 6 ಪಂದ್ಯಗಳಲ್ಲಿ ಗೆದ್ದು, ಇನ್ನುಳಿದ ಆರು ಪಂದ್ಯಗಳಲ್ಲಿ ಸೋತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳಲು ಬೇಕಾದ ಕನಿಷ್ಟ 16 ಅಂಕಗಳನ್ನು ಹೊಂದಲು ಇಂದು ಎರಡೂ ತಂಡಗಳು ಸೆಣಸಾಟ ನಡೆಸಲಿವೆ. ಇದರ ಜತೆಗೆ ಈ ಪಂದ್ಯದ ಫಲಿತಾಂಶ ಮತ್ತೊಂದು ತಂಡದ ಪ್ಲೇಆಫ್ ಪ್ರವೇಶವನ್ನು ನಿರ್ಧರಿಸಲಿದೆ ಹಾಗೂ ಈಗಾಗಲೇ ಪ್ಲೇಆಫ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾಲಿಫಯರ್ 1 ಆಡದಲಿದೆಯೇ ಎಂಬುದನ್ನು ಇಂದೇ ನಿರ್ಧರಿಸಲಿದೆ.
ಹೌದು, ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದರೆ ಅವರ ಅಂಕ 16ಕ್ಕೆ ಏರಿಕೆಯಾಗಲಿದ್ದು, ಪ್ಲೇಆಫ್‌ಗೆ ಅಧಿಕೃತ ಪ್ರವೇಶ ಪಡೆದುಕೊಳ್ಳಲಿದೆ. ಅದರ ಜತೆಗೆ 16 ಅಂಕಗಳನ್ನೇ ಹೊಂದಿರುವ ಗುಜರಾತ್ ಟೈಟನ್ಸ್ ಸಹ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಏಕೆಂದರೆ ಈ ಫಲಿತಾಂಶ ಬಂದರೆ ಪ್ಲೇಆಫ್ ರೇಸ್‌ನಲ್ಲಿರುವ ಪಂಜಾಬ್, ಚೆನ್ನೈ ಹಾಗೂ ರಾಜಸ್ತಾನ್ ಯಾವ ತಂಡಗಳಿಗೂ 16 ಅಂಕ ಸಂಪಾದಿಸುವ ಅರ್ಹತೆ ಉಳಿದಿರುವುದಿಲ್ಲ.
ಒಂದುವೇಳೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದರೆ ಅವರ ಅಂಕ 14ಕ್ಕೆ ತಲುಪಲಿದ್ದು, ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಲಿದೆ. ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಪಂದ್ಯದ ಫಲಿತಾಂಶದ ಚಿಂತೆಯಿಲ್ಲದೇ ಕ್ವಾಲಿಫಯರ್ 1 ಪಂದ್ಯವನ್ನಾಡಲು ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಹೈದರಾಬಾದ್ ಈ ಪಂದ್ಯ ಸೋತರೆ ಆರ್‌ಸಿಬಿಯ ಹಾಗೆ 18 ಅಂಕ ದಾಟುವ ಅರ್ಹತೆ ಗುಜರಾತ್‌ಗೆ ಮಾತ್ರ ಉಳಿಯುವ ಕಾರಣ ಆರ್‌ಸಿಬಿ ಒಂದನೇ ಕ್ವಾಲಿಫಯರ್ ಆಡಲು ಅರ್ಹತೆ ಪಡೆದುಕೊಳ್ಳಲಿದ್ದು, ಫೈನಲ್ ತಲುಪಲು ಎರಡೆರಡು ಚಾನ್ಸ್ ದೊರಕಿದಂತಾಗಲಿದೆ.

