ಬಾಲಿವುಡ್ನ ಪ್ರತಿಭಾವಂತ ನಟಿ ಯಾಮಿ ಗೌತಮ್ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೈದಾನದಲ್ಲಿ ವಿಜೃಂಭಣೆಯಿಂದ ನಡೆದ ಪ್ರಸಿದ್ಧ ಲವ್ ಕುಶ್ ರಾಮಲೀಲಾ ಮಹೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ದಸರಾ ಹಬ್ಬದ ಮೆರುಗನ್ನು ಹೆಚ್ಚಿಸಿದ್ದಾರೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರುವ ದಸರಾ ಹಬ್ಬದ ಪ್ರಮುಖ ಆಚರಣೆಯಾದ ಸಾಂಕೇತಿಕ ರಾವಣ ದಹನ ಕಾರ್ಯಕ್ರಮವನ್ನು ನಟಿ ಯಾಮಿ ಗೌತಮ್ ಅವರು ನೆರವೇರಿಸಿಕೊಟ್ಟಿದ್ದಾರೆ.
ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಆನಂದ್ ಎಲ್. ರಾಯ್ ಅವರೊಂದಿಗೆ ಈ ರಾಮಲೀಲಾ ವೇದಿಕೆಗೆ ಆಗಮಿಸಿದ ಯಾಮಿ ಗೌತಮ್, ವಿಧ್ಯುಕ್ತವಾಗಿ ಬಿಲ್ಲು ಮತ್ತು ಬಾಣವನ್ನು ಹಿಡಿದು ರಾವಣನ ದೆತ್ಯಾಕಾರದ ಪ್ರತಿಕೃತಿಯನ್ನು ದಹನ ಮಾಡಿದರು. ಕೆಂಪು ಕೋಟೆ ಮೈದಾನದಲ್ಲಿ ಜಮಾಯಿಸಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ನಡೆದ ಈ ಐತಿಹಾಸಿಕ ಕಾರ್ಯಕ್ರಮವು ನೆರೆದಿದ್ದವರಲ್ಲಿ ಭಕ್ತಿ ಹಾಗೂ ಉತ್ಸಾಹವನ್ನು ಮೂಡಿಸಿತು.
ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಯಾಮಿ ಗೌತಮ್ ಅವರ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಎಲ್ಲರ ವಿಶೇಷ ಗಮನ ಸೆಳೆದವು. ಖ್ಯಾತ ಡಿಸೈನರ್ ಅನಿತಾ ಡೊಂಗ್ರೆ ಅವರ ಕಲೆಕ್ಷನ್ನ ರಾಯಲ್ ಪರ್ಪಲ್ ಬಣ್ಣದ ಅಂದವಾದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಅವರು, ರಾಜಮನೆತನದ ಲುಕ್ನಲ್ಲಿ ಮಿಂಚಿದರು. ಸೀರೆಯ ಅಂಚುಗಳಲ್ಲಿ ಮಿನುಗುವ ಚಿನ್ನದ ಬಣ್ಣದ ವಿನ್ಯಾಸ ಹಾಗೂ ಯಾವುದೇ ಅತಿಶಯವಿಲ್ಲದ ಸಿಂಪಲ್ ಮೇಕಪ್ ಅವರ ಸೌಂದರ್ಯವನ್ನು ಇನ್ನುಷ್ಟು ಹೆಚ್ಚಿಸಿತ್ತು. ಮ್ಯಾಚಿಂಗ್ ಗೋಲ್ಡನ್ ಇಯರಿಂಗ್ಸ್, ಹಣೆಯ ಮೇಲೊಂದು ಕಲಾತ್ಮಕ ಸಣ್ಣ ಬಿಂದಿ ಹಾಗೂ ಮುಕ್ತವಾಗಿ ಬಿಟ್ಟಿದ್ದ ಕೇಶವಿನ್ಯಾಸ ಅವರ ಒಟ್ಟಾರೆ ಸಾಂಪ್ರದಾಯಿಕ ಲುಕ್ಗೆ ಪರಿಪೂರ್ಣ ಮೆರುಗು ನೀಡಿತ್ತು.

